
ಕಡಬ ತಾಲೂಕಿನ ಐತ್ತೂರು ಗ್ರಾಮದ ಪಂಜೋಡಿ ನಿವಾಸಿ, ಒಂಟಿ ವಿಧವೆ ಸುಶೀಲಾ ಅವರು ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ನೆರವು ಪಡೆಯಲು ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದರೂ ತಾಂತ್ರಿಕ ಸಮಸ್ಯೆಯಿಂದ ಯೋಜನೆಯಿಂದ ವಂಚಿತರಾಗಿದ್ದಾರೆ. “ನೀವು ಕುಟುಂಬದ ಯಜಮಾನಿಯಲ್ಲ” ಎಂಬ ಸಾಫ್ಟ್ವೇರ್ ದೋಷದಿಂದಾಗಿ ಅರ್ಜಿ ಸಲ್ಲಿಕೆಯಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.


ಕಡಬ / ಐತ್ತೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಪ್ರಯೋಜನವನ್ನು ಪಡೆಯಲು ಬಡ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆಯಿಂದ ವಂಚಿತರಾಗಿ ಅಲೆದಾಡುತ್ತಿರುವ ಘಟನೆ ಕಡಬ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಪಂಜೋಡಿ ನಿವಾಸಿ, ಒಂಟಿ ವಿಧವೆ ಸುಶೀಲಾ ಎಂಬವರೇ ಸಾಫ್ಟ್ವೇರ್ ಲೋಪದಿಂದಾಗಿ ಸರ್ಕಾರದ ಮಾಸಿಕ ₹2,000 ಪ್ರೋತ್ಸಾಹಧನ ಸಿಗದೆ ಕಷ್ಟಪಡುತ್ತಿರುವ ಮಹಿಳೆಯಾಗಿದ್ದಾರೆ.
ಸುಶೀಲಾ ಅವರ ಗಂಡ ರಂಗಪ್ಪ ಗೌಡ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಅವರಿಗೆ ಮಕ್ಕಳೂ ಇಲ್ಲದ ಕಾರಣ ಬದುಕಿಗೆ ಕೂಲಿ ಕೆಲಸವೇ ಆಸರೆಯಾಗಿದೆ. ಅನಾರೋಗ್ಯದ ನಡುವೆಯೂ ದುಡಿದು ಜೀವನ ಸಾಗಿಸುತ್ತಿರುವ ಇವರಿಗೆ, ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣವು ಸಣ್ಣ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು.
ಅವರ ಬಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೆಲ್ಲವೂ ಸರಿಯಾಗಿವೆ. ರೇಷನ್ ಕಾರ್ಡ್ನಲ್ಲಿ ಅವರ ಹೆಸರೇ ಕುಟುಂಬದ ಯಜಮಾನಿ ಎಂದು ನಮೂದಾಗಿದೆ. ಆದಾಗ್ಯೂ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಹೋದಾಗಲೆಲ್ಲ “ನೀವು ಕುಟುಂಬದ ಯಜಮಾನಿಯಲ್ಲ” ಎಂಬ ತಾಂತ್ರಿಕ ಸಂದೇಶ ಕಾಣಿಸಿಕೊಂಡು ಅರ್ಜಿ ಸ್ವೀಕಾರವಾಗುತ್ತಿಲ್ಲ.


ಇಲಾಖೆಗಳ ನಡುವೆ ಗೊಂದಲ – ಸಿಡಿಪಿಒ ಕಚೇರಿಗೆ ಅಲೆದಾಟ:
ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸುಶೀಲಾ ಅವರು ಹಲವಾರು ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಿಡಿಪಿಒ (CDPO) ಕಚೇರಿಗೆ ಅಲೆದಾಡಿದ್ದಾರೆ. “ನಿಮ್ಮ ಅರ್ಜಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ” ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತು ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ.
ಆಹಾರ ಇಲಾಖೆಯು ‘ರೇಷನ್ ಕಾರ್ಡ್ ದಾಖಲೆಗಳು ಸರಿಯಾಗಿವೆ’ ಎಂದು ಸ್ಪಷ್ಟಪಡಿಸಿದರೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಿಡಿಪಿಒ ಕಚೇರಿ ಹಂತದಲ್ಲಿ ಈ ತಾಂತ್ರಿಕ ಲೋಪವನ್ನು ಪರಿಹರಿಸಲು ಸೂಕ್ತ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಸುಶೀಲಾ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಮನವಿ ಸಲ್ಲಿಸಲು ಸಿದ್ಧತೆ:
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಮಹಿಳಾ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿರುವ ಇವರು, ಇನ್ನಾದರೂ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಾಂತ್ರಿಕ ದೋಷವನ್ನು ತಕ್ಷಣವೇ ಸರಿಪಡಿಸಿ ಅರ್ಹ ಫಲಾನುಭವಿಯಾಗಿರುವ ಸುಶೀಲಾ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ದೊರಕಿಸಿಕೊಡಬೇಕಿದೆ.
