
ಪ್ರೀತಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದ್ದಲ್ಲದೆ, ಆಕೆಯ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಹಾಗೂ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಚಾರ್ವಾಕ ಗ್ರಾಮದ ಯುವಕನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.


ಕಡಬ: ಪ್ರೀತಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ನಿರಂತರವಾಗಿ ಹಿಂಬಾಲಿಸಿ (Stalking) ಕಿರುಕುಳ ನೀಡಿದ್ದಲ್ಲದೆ, ಆಕೆಯ ಮನೆಯವರಿಗೆ ಕೊಲೆ ಬೆದರಿಕೆ ಹಾಗೂ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಪದ್ಮನಾಭ ಎಂಬಾತನೇ ಪ್ರಕರಣದ ಆರೋಪಿಯಾಗಿದ್ದಾನೆ.
18 ವರ್ಷದ ಯುವತಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ,ಆಕೆ ಮನೆಗೆ ಬರುವಾಗ ಸಂಬಂಧಿ ಪದ್ಮನಾಭ ಎಂಬಾತನು ನಿರಂತರವಾಗಿ ಹಿಂಬಾಲಿಸಿಕೊಂಡು ಬರುತ್ತಿದ್ದನು. ಈ ಕುರಿತು ಯುವತಿಯ ಮನೆಯವರು ಆರೋಪಿಗೆ ಎಚ್ಚರಿಕೆಯನ್ನೂ ನೀಡಿದ್ದರು.


ಜುಲೈ 29 ರಂದುಯುವತಿಯ ಮನೆ ಬಳಿ ಬಂದಿದ್ದ ಆರೋಪಿ , ನಮ್ಮಿಬ್ಬರ ಪ್ರೀತಿ ತಪ್ಪಿ ಹೋಯಿತು. ನಾನು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ, ನಾನು ಸಾಯುತ್ತೇನೆ” ಎಂದು ಯುವತಿಯ ತಾಯಿ ಹಾಗೂ ಅಕ್ಕನಿಗೆ ಕೇಳಿಸುವಂತೆ ಕೊಲೆ ಬೆದರಿಕೆ ಹಾಕಿದ್ದನು.ಅಲ್ಲದೆ, ಆಗಸ್ಟ್ 10 ರಂದು ಮತ್ತೆ ಮನೆ ಬಳಿ ಬಂದ ಆರೋಪಿಯು, ಯುವತಿಯ ಅಕ್ಕನಿಗೆ ಕರೆ ಮಾಡಿ “ಆಕೆ ನನ್ನೊಂದಿಗೆ ಮಾತನಾಡದಿದ್ದರೆ ನಾನು ಸತ್ತು ಹೋಗುತ್ತೇನೆ” ಎಂದು ಬೆದರಿಕೆಯೊಡ್ಡಿದ್ದನು.
ಕಡಬ ಠಾಣೆಯಲ್ಲಿ BNS ಕಾಯ್ದೆಯಡಿ ಪ್ರಕರಣ:
ಪ್ರೀತಿಸುವಂತೆ ಹಿಂಬಾಲಿಸಿ ಕಿರುಕುಳ ನೀಡುತ್ತಾ, ಕುಟುಂಬಸ್ಥರಿಗೆ ಜೀವಬೆದರಿಕೆ ಒಡ್ಡುತ್ತಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿಯು ಆಗಸ್ಟ್ 11 ರಂದು ಕಡಬ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 96/2026 ರಲ್ಲಿ ಬಿಎನ್ಎಸ್ (BNS 2023) ಕಲಂ 78(2) ಹಾಗೂ 351(2) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಕಡಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
