
ಕಡಬದ ಕುಂಡಡ್ಕ ಪಾಲ್ಸ್ನಲ್ಲಿ ಅಪ್ರಾಪ್ತ ಶಾಲಾ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ‘ಅಟ್ರಾಸಿಟಿ’ ಕೇಸ್ ದಾಖಲಾದ ಬೆನ್ನಲ್ಲೇ, ಘಟನೆ ನಡೆದ 8 ದಿನಗಳ ನಂತರ ಬಾಲಕಿಯ ಮೂಲಕ ‘ಲೈಂಗಿಕ ದೌರ್ಜನ್ಯ’ದ ಕೌಂಟರ್ ದೂರು ನೀಡಲಾಗಿದೆ. ಪ್ರಕರಣವನ್ನು ತಿರುಚುವ ಯತ್ನ ನಡೆಯುತ್ತಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸದಿದ್ದರೆ ಕಡಬ ಠಾಣೆ ಎದುರು ಬೃಹತ್ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ವಸಂತ ಕುಬಲಾಡಿ ಎಚ್ಚರಿಸಿದ್ದಾರೆ.


ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಕುಂಡಡ್ಕ ಪಾಲ್ಸ್ ಬಳಿ ಶಾಲಾ ವಿದ್ಯಾರ್ಥಿಗಳಿಗೆ ನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ‘ಅಟ್ರಾಸಿಟಿ’ (SC/ST Act) ಪ್ರಕರಣ ದಾಖಲಾದ ಬೆನ್ನಲ್ಲೇ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಹಲವು ಸಂಶಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಕರಣದ ಪ್ರಮುಖ ಆರೋಪಿಯ ಪುತ್ರಿಯ ಮೂಲಕವೇ ಘಟನೆ ನಡೆದ 8 ದಿನಗಳ ನಂತರ ಅಪ್ರಾಪ್ತ ಬಾಲಕರ ವಿರುದ್ಧ ‘ಲೈಂಗಿಕ ದೌರ್ಜನ್ಯ’ದ ಕೌಂಟರ್ ದೂರು ಸಲ್ಲಿಕೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ಹಿನ್ನೆಲೆ: ಆಗಸ್ಟ್ 03ರಂದು ರಜೆ ಇದ್ದ ಕಾರಣ 9ನೇ ತರಗತಿಯ 14 ವರ್ಷದ ಬಾಲಕನು ತನ್ನ ಇಬ್ಬರು ಸಹಪಾಠಿಗಳೊಂದಿಗೆ ಬಂಟ್ರ ಗ್ರಾಮದ ಕುಂಡಡ್ಕ ಪಾಲ್ಸ್ಗೆ ತೆರಳಿದ್ದಾಗ, ಅಲ್ಲಿಗೆ ಆಗಮಿಸಿದ್ದ ಬಾಲಕಿಯ ತಂದೆ (A1), ಉಮೇಶ್ (A2), ದೇವಿಪ್ರಸಾದ್ (A3), ರೋಹಿತ್ (A4) ಹಾಗೂ ಚಂದನ್ (A5) ಎಂಬವರು ಬಾಲಕರಿಗೆ ನಿಂದನೆ ಮಾಡಿ, ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕುರಿತು ಅಪ್ರಾಪ್ತ ಬಾಲಕ ನೀಡಿದ ದೂರಿನಂತೆ ಕಡಬ ಠಾಣಾ ಅಪರಾಧ ಸಂಖ್ಯೆ: 97/2026 ರಲ್ಲಿ ಬಿಎನ್ಎಸ್ (BNS 2023) ಹಾಗೂ ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆಯಡಿ ಕಡಬ ಎಸ್ಐ ಜಂಬೂರಾಜ್ ಮಹಾಜನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು.


ಅಟ್ರಾಸಿಟಿ ಎಫ್ಐಆರ್ ದಾಖಲಾದ ಬೆನ್ನಲ್ಲೇ, ಘಟನೆ ನಡೆದ ಎಂಟು ದಿನಗಳ ನಂತರ ಪ್ರಮುಖ ಆರೋಪಿಯ ಪುತ್ರಿಯ ಮೂಲಕ “ಮೂವರು ಅಪ್ರಾಪ್ತ ಬಾಲಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಹೊಸ ದೂರು ನೀಡಲಾಗಿದೆ. ಹಲ್ಲೆ ನಡೆಸಿ ಎಫ್ಐಆರ್ ಎದುರಿಸುತ್ತಿರುವ ಆರೋಪಿಯೇ ತನ್ನ ಮಗಳ ಮೂಲಕ ದೂರು ನೀಡಿರುವುದು ಪ್ರಕರಣದಿಂದ ಬಚಾವ್ ಆಗಲು ನಡೆಸಿರುವ ತಂತ್ರ ಹಾಗೂ ಸಂಶಯಾಸ್ಪದ ಬೆಳವಣಿಗೆ ಎಂದು ಚರ್ಚೆಯಾಗುತ್ತಿದೆ. ಸದ್ಯ ಸಂತ್ರಸ್ತೆ ಹಾಗೂ ಆರೋಪಿಗಳಿಬ್ಬರೂ ಅಪ್ರಾಪ್ತರಾಗಿರುವುದರಿಂದ ಕಡಬ ಪೊಲೀಸರು ದೂರರ್ಜಿಯನ್ನು (Petitions Complaint) ಸ್ವೀಕರಿಸಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸತ್ಯಾಸತ್ಯತೆಯ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಆರೋಪಿಗಳ ಬಂಧಿಸದಿದ್ದರೆ ಠಾಣೆ ಎದುರು ಪ್ರತಿಭಟನೆ: ವಸಂತ ಕುಬಲಾಡಿ ಎಚ್ಚರಿಕೆ
ಈ ಬೆಳವಣಿಗೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿ, “ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ಶಾಲಾ ಮಕ್ಕಳ ಮೇಲೆ ನಡೆದ ದೌರ್ಜನ್ಯದ ಪ್ರಕರಣವನ್ನು ದಾರಿ ತಪ್ಪಿಸಲು ಆರೋಪಿಗಳು ಕೌಂಟರ್ ದೂರಿನ ಅಸ್ತ್ರ ಬಳಸುತ್ತಿದ್ದಾರೆ. ಪ್ರಕರಣವನ್ನು ತಿರುಚುವ ಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದೆ” ಎಂದು ಆರೋಪಿಸಿದ್ದಾರೆ. “ಅಪ್ರಾಪ್ತ ಮಕ್ಕಳ ಮೇಲಿನ ಹಲ್ಲೆಯನ್ನು ಪೊಲೀಸ್ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಹೆದರಿಕೊಂಡು ತಡವಾಗಿ ದೂರು ನೀಡಿದ ಮಕ್ಕಳ ಮೇಲೆಯೇ ಸುಳ್ಳು ಆರೋಪ ಹೊರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕಡಬ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಅಟ್ರಾಸಿಟಿ ಕೇಸ್ನ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಕಡಬ ಪೊಲೀಸ್ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ” ಎಂದು ವಸಂತ ಕುಬಲಾಡಿ ಎಚ್ಚರಿಕೆ ನೀಡಿದ್ದಾರೆ
