
ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ 2024ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಆತನ ಅಣ್ಣ ಹಾಗೂ ಬೈಕ್ ಮಾಲೀಕ ಅಬ್ದುಲ್ ಹಕೀಂಗೆ ₹35,000 ದಂಡ ಮತ್ತು 1 ದಿನದ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅಪಘಾತ ಎಸಗಿದ ಬಾಲಕನಿಗೆ 25 ವರ್ಷ ತುಂಬುವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡದಂತೆ ಆರ್ಟಿಒಗೆ ಸೂಚಿಸಿದ್ದು, ಬೈಕ್ ಆರ್ಸಿ ಅಮಾನತುಗೊಳಿಸಲಾಗಿದೆ.


ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯವು ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದ ಆತನ ಸಹೋದರ ಹಾಗೂ ಬೈಕ್ ಮಾಲೀಕನಿಗೆ ನ್ಯಾಯಾಲಯವು ₹35,000 ದಂಡ ಹಾಗೂ 1 ದಿನದ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಅಪಘಾತ ಎಸಗಿದ ಅಪ್ರಾಪ್ತ ಬಾಲಕನಿಗೆ 25 ವರ್ಷ ವಯಸ್ಸಾಗುವವರೆಗೆ ಚಾಲನಾ ಪರವಾನಗಿ (Driving Licence) ನೀಡದಂತೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (RTO) ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ, ಅಪಘಾತಕ್ಕೀಡಾದ ಬೈಕ್ನ ನೋಂದಣಿ ಪತ್ರವನ್ನು (RC) 1 ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ
2024ರ ಜುಲೈ 20ರಂದು ರಾತ್ರಿ ಸುಮಾರು 7.30ರ ವೇಳೆಗೆ ಅಪ್ರಾಪ್ತ ಬಾಲಕನೊಬ್ಬ ‘ಯಮಹಾ ಎಫ್.ಝಡ್’ ಬೈಕ್ನಲ್ಲಿ (KA 21 EE 3296) ಕಕ್ಯಪದವು-ಕಲ್ಲೇರಿ ಸಾರ್ವಜನಿಕ ರಸ್ತೆಯಲ್ಲಿ ಮೂರುಗೋಳಿ ಕಡೆಯಿಂದ ಕಲ್ಲೇರಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದ.
ಕರಾಯ ಗ್ರಾಮದ ತುರ್ಕಳಿಕೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಶಿವಾನಂದ ಎಂಬವರ ಸ್ಕೂಟರ್ಗೆ (KA 19 W 7247) ಬೈಕ್ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರ ಶಿವಾನಂದ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು.
ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪುತ್ತೂರು ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ. ಅವರು ಪೂರ್ಣಪ್ರಮಾಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.


ನ್ಯಾಯಾಲಯದ ಮಹತ್ವದ ತೀರ್ಪು:
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಳ್ತಂಗಡಿಯ ಹಿರಿಯ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮನು ಬಿ.ಕೆ. ಅವರು, ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಬೈಕ್ನ ಆರ್ಸಿ ಮಾಲೀಕ, ತಣ್ಣೀರುಪಂತ ನಿವಾಸಿ ಅಬ್ದುಲ್ ಹಕೀಮ್ ಅವರನ್ನು ದೋಷಿ ಎಂದು ತೀರ್ಮಾನಿಸಿದರು.
-
ಬೈಕ್ ಮಾಲೀಕನಿಗೆ ಶಿಕ್ಷೆ: ಅಪ್ರಾಪ್ತನಿಗೆ ವಾಹನ ನೀಡಿದ ಆತನ ಅಣ್ಣ ಅಬ್ದುಲ್ ಹಕೀಮ್ಗೆ ₹35,000 ದಂಡ ಹಾಗೂ 1 ದಿನದ ಸಾಂಕೇತಿಕ ಜೈಲು ಶಿಕ್ಷೆ.
-
ಆರ್ಸಿ ಅಮಾನತು: ಅಪಘಾತ ಎಸಗಿದ ಬೈಕ್ನ ನೋಂದಣಿ ಪತ್ರ (RC) 1 ವರ್ಷದ ಅವಧಿಗೆ ರದ್ದು/ಅಮಾನತು.
-
ಲೈಸೆನ್ಸ್ ನಿಷೇಧ: ಅಪಘಾತ ಎಸಗಿದ ಬಾಲಕನಿಗೆ 25 ವರ್ಷ ವಯಸ್ಸಾಗುವ ತನಕ ಯಾವುದೇ ಕಾರಣಕ್ಕೂ ಚಾಲನಾ ಪರವಾನಗಿ ನೀಡಬಾರದು ಎಂದು ಸಾರಿಗೆ ಇಲಾಖೆಗೆ (RTO) ಕಟ್ಟುನಿಟ್ಟಿನ ನಿರ್ದೇಶನ.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರು ಹಾಗೂ ಪೋಷಕತ್ವ ವಹಿಸುವವರಿಗೆ ಈ ತೀರ್ಪು ಬಲಿಷ್ಠ ಎಚ್ಚರಿಕೆಯ ಸಂದೇಶ ನೀಡಿದೆ.
