
ಬಂಟ್ವಾಳ: ಸಾರ್ವಜನಿಕರು ಓಡಾಡುವ ಜನನಿಬಿಡ ಪ್ರದೇಶದಲ್ಲೇ ಯುವತಿಯೊಬ್ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಿ.ಸಿ. ರೋಡ್ನ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಬಳಿ ಗುರುವಾರ (ಜುಲೈ 16) ಸಂಜೆ ನಡೆದಿದೆ.


ಘಟನೆಯ ವಿವರ: ಜುಲೈ 16 ರಂದು ಸಂಜೆ ಸುಮಾರು 6:00 ಗಂಟೆಯ ವೇಳೆಗೆ ಬಿ.ಸಿ. ರೋಡ್ನ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 21 ರಿಂದ 25 ವರ್ಷ ಪ್ರಾಯದ ಯುವತಿಯೊಬ್ಬಳು ಬಸ್ಗಾಗಿ ಕಾಯುತ್ತಾ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಯಾರೋ ಅಪರಿಚಿತ ವ್ಯಕ್ತಿಯೊಬ್ಬ, ಏಕಾಏಕಿ ಹರಿತವಾದ ಆಯುಧದಿಂದ ಆಕೆಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ:


ಆಯುಧದ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಿಸದೆ ಯುವತಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಭೀಕರ ಹತ್ಯೆಗೆ ನಿಖರ ಕಾರಣವೇನು? ಕೊಲೆಗಡುಕ ಯಾರು? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
