
ಬಂಟ್ವಾಳ: ಬಿ.ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿಯ ಭೀಕರ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಬಸ್ನೊಳಗೆ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರ ಸಮ್ಮುಖದಲ್ಲೇ ಎಳೆದು ತಂದು ಕತ್ತಿಯಿಂದ ಇರಿದು ಕ್ರೂರವಾಗಿ ಕೊಲ್ಲಲಾಗಿದೆ.


ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಬಾಲಕೃಷ್ಣ ಗೌಡ ಎಂಬವರ ಪುತ್ರಿ ಲಾವಣ್ಯ (21) ಎಂದು ಗುರುತಿಸಲಾಗಿದೆ.
ಬಸ್ನೊಳಗೆ ನುಗ್ಗಿ ದಬ್ಬಾಳಿಕೆ:ಲಾವಣ್ಯ ಅವರು ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ತಮ್ಮ ಊರಾದ ಕಕ್ಯಪದವು ಕಡೆಗೆ ಹೋಗುವ ಸರ್ಕಾರಿ ಬಸ್ಸಿನೊಳಗೆ ಕುಳಿತಿದ್ದರು. ಈ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಗೌಡ ಎಂಬಾತ, ಏಕಾಏಕಿ ಬಸ್ಸಿನೊಳಗೆ ನುಗ್ಗಿದ್ದಾನೆ. ಬಸ್ನಲ್ಲಿದ್ದ ಲಾವಣ್ಯಳನ್ನು ಬಲವಂತವಾಗಿ ಕೆಳಗಿಳಿಸಿದ್ದಾನೆ ಎನ್ನಲಾಗಿದೆ.
ಬಳಿಕ ಬಸ್ ನಿಲ್ದಾಣದ ಆವರಣದಲ್ಲೇ ತಾನು ತಂದಿದ್ದ ಕತ್ತಿಯಿಂದ ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಲಾವಣ್ಯರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.


ಏಕಪಕ್ಷೀಯ ಪ್ರೀತಿ:ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಚೇತನ್ ಗೌಡ ಮೃತ ಲಾವಣ್ಯಳಿಗೆ ದೂರದ ಸಂಬಂಧಿಯಾಗಿದ್ದ. ಈತ ಲಾವಣ್ಯಳನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿಯೇ ಈ ಘೋರ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಬಂಟ್ವಾಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಹಂತಕ ಚೇತನ್ ಗೌಡನ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
