ಉಪ್ಪಿನಂಗಡಿ ಬಳಿ ನಕಲಿ ಕರೆನ್ಸಿ ನೋಟು ಮುದ್ರಿಸುತ್ತಿದ್ದ ಬೃಹತ್ ಜಾಲ ಪತ್ತೆ ಹಚ್ಚಿದ ಪೊಲೀಸರು:ಏಳು ಮಂದಿ ಖಾಕಿ ವಶಕ್ಕೆ

kadaba times

ಉಪ್ಪಿನಂಗಡಿ: ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಕಟ್ಟಡವೊಂದರಲ್ಲಿ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು (ಖೋಟಾ ನೋಟು) ಮುದ್ರಿಸುತ್ತಿದ್ದ ಬೃಹತ್ ಜಾಲವೊಂದನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ನಡೆದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

kadaba times
uniq

ಖಚಿತ ಮಾಹಿತಿ ಮೇರೆಗೆ  ದಾಳಿ: ಅಡೆಂಜದ ಕಟ್ಟಡವೊಂದರಲ್ಲಿ ನಕಲಿ ನೋಟು ಮುದ್ರಿಸಲಾಗುತ್ತಿದೆ ಎಂಬ ದೂರು ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ (PSI) ಸುತೇಶ್ ಕೆ.ಪಿ. ಅವರಿಗೆ ತಲುಪಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ, ಜುಲೈ 16 ರಂದು ಮುಂಜಾನೆ ಸದ್ರಿ ಸ್ಥಳಕ್ಕೆ ಮಿಂಚಿನ ದಾಳಿ ನಡೆಸಿ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇಬ್ರಾಹಿಂ (60), ವಾಸ: ಪುತ್ತೂರು ಕಸಬ ಗ್ರಾಮ, ಶರೀಪ (51), ವಾಸ: ಚಂಗುಲ ಗ್ರಾಮ, ಕಾಸರಗೋಡು ಜಿಲ್ಲೆ,ಸಂದೀಪ ಪುಂಡಲಿಕ ಶೋಳಂಬಿ (30), ವಾಸ: ಹಳಿಯಾಳ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಮಹಮ್ಮದ್ ನಬಾಸ್ (37), ವಾಸ: ಆಮೂರು ಗ್ರಾಮ, ಕಾಸರಗೋಡು ಜಿಲ್ಲೆ.ಸಲ್ಮಾನ್ ಫಾರೀಸ್ (25), ವಾಸ: ಒಳಮೊಗ್ರು ಗ್ರಾಮ, ಪುತ್ತೂರು, ಸಿರಾಜುದ್ದೀನ್ (34), ವಾಸ: ಉರುವಾಲು ಗ್ರಾಮ, ಬೆಳ್ತಂಗಡಿ,ಇರ್ಷಾದ್ (31), ವಾಸ: ಪುತ್ತಿಲ ಗ್ರಾಮ, ಬೆಳ್ತಂಗಡಿ ಬಂಧಿತರು.

ನೋಟು, ಗಣಕಯಂತ್ರ ಹಾಗೂ ಝರಾಕ್ಸ್ ಮೆಷಿನ್ ವಶ: ದಾಳಿ ನಡೆಸಿದ ಸ್ಥಳದಲ್ಲಿ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ತಂತ್ರಜ್ಞಾನದ ಉಪಕರಣಗಳು ಪತ್ತೆಯಾಗಿವೆ. ಪೊಲೀಸರು ಸ್ಥಳದಿಂದ ₹500 ಮುಖಬೆಲೆಯ ಒಂದು ಅಸಲಿ ನೋಟು, 500 ರೂ. ಮುಖಬೆಲೆಯ ನೋಟುಗಳಂತೆ ಮುದ್ರಿಸಲಾಗಿದ್ದ 21 ಎ-4 (A-4) ಸೈಜ್‌ನ ಕಾಗದದ ಹಾಳೆಗಳು, ಗಣಕಯಂತ್ರ (Computer), ಝರಾಕ್ಸ್ ಮೆಷಿನ್ ಹಾಗೂ ವಿವಿಧ ನಕಲಿ ಸೀಲ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

kadaba times
kadaba times

ಜಂಟಿ ಕಾರ್ಯಾಚರಣೆ ಯಶಸ್ಸು: ಈ ಅಂತರಜಿಲ್ಲಾ ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚುವಲ್ಲಿ ಉಪ್ಪಿನಂಗಡಿ ಪಿಎಸ್‌ಐ ಅವರೊಂದಿಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಬಿಂದು ಮಣಿ ಆರ್.ಎನ್. (IPS) ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೋಗೀಶ್ ಬಿ. (HC 193) ಮತ್ತು ನಿರಂಜನ್ ಎಂ.ಎನ್. (HC 190) ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟನಾ ವಿಭಾಗದ ಪೊಲೀಸ್ ನಿರೀಕ್ಷಕರಾದ ನಂದಕುಮಾರ್, ಎ.ಎಸ್.ಐ ದೀಪಕ್, ಹೆಚ್.ಸಿ. ಸತೀಶ್ ಮತ್ತು ಹೆಚ್.ಸಿ. ರೌಫ್ ಅವರು ಜಂಟಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.

ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಉಪ್ಪಿನಂಗಡಿ ಪೊಲೀಸರು, ಪ್ರಕರಣದ ಅ.ಕ್ರ ಸಂಖ್ಯೆ: 103/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ: 178 ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು, ಈ ದಂಧೆಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತೀವ್ರ ತನಿಖೆ ಕೈಗೊಂಡಿದ್ದಾರೆ.

Related Articles

Latest Articles