
ಬಂಟ್ವಾಳ: ಬಿ.ಸಿ. ರೋಡ್ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ನರ್ಸಿಂಗ್ ಸಿಬ್ಬಂದಿ ಲಾವಣ್ಯ (22) ಅವರ ಭೀಕರ ಕೊಲೆ ಪ್ರಕರಣ ಇಡೀ ಕರಾವಳಿಯನ್ನೇ ಕಂಗೆಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರಿಯ ಪತಿ (ಭಾವ) ಗೌತಮ್ ಅವರು ಬಂಟ್ವಾಳ ಠಾಣೆಗೆ ನೀಡಿರುವ ಅಧಿಕೃತ ದೂರಿನ (FIR) ವಿವರಗಳು ಈಗ ಲಭ್ಯವಾಗಿವೆ.


ಕಕ್ಯಪದವು ಸಮೀಪದ ಕೊಡಂಗೆ ನಿವಾಸಿಯಾದ ಲಾವಣ್ಯ ಅವರು ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು. ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಆಕೆಯ ದೂರದ ಸಂಬಂಧಿ, ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ಗ್ರಾಮದ ನಿವಾಸಿ ಚೇತನ್ ಎಂಬಾತ ತಲವಾರಿನಿಂದ ಕಡಿದು ಈ ಕ್ರೂರ ಹತ್ಯೆ ಎಸಗಿದ್ದಾನೆ.
ಎಫ್ಐಆರ್ (FIR) ನಲ್ಲಿ ಏನಿದೆ?:
ದೂರುದಾರ ಗೌತಮ್ ಅವರ ಪತ್ನಿ ಚೈತ್ರಾ ಹಾಗೂ ಆಕೆಯ ತಂಗಿ ಲಾವಣ್ಯ ಇಬ್ಬರೂ ಕಲ್ಲಡ್ಕದ ನರ್ಸಿಂಗ್ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಲಾವಣ್ಯ ಹಗಲು ಪಾಳಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರೆ, ಅಕ್ಕ ಚೈತ್ರಾ ರಾತ್ರಿ ಪಾಳಿ ಕರ್ತವ್ಯಕ್ಕೆ ಹಾಜರಾಗಿದ್ದರು.
“ಚೇತನ್ ಕಿರುಕುಳ ನೀಡುತ್ತಿದ್ದಾನೆ…” ಗುರುವಾರ ಸಂಜೆ ಸುಮಾರು 5:45 ಗಂಟೆಯ ವೇಳೆಗೆ ಚೈತ್ರಾ ಅವರು ಪತಿ ಗೌತಮ್ ಅವರಿಗೆ ಕರೆ ಮಾಡಿ, “ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದಾಳೆ. ಅಲ್ಲಿಗೆ ಬಂದಿರುವ ಚೇತನ್ ಆಕೆಗೆ ತೀವ್ರ ಕಿರುಕುಳ ನೀಡುತ್ತಿದ್ದಾನೆ. ನೀನು ತಕ್ಷಣ ಲಾವಣ್ಯಳ ಮೊಬೈಲ್ಗೆ ಕರೆ ಮಾಡಿ ಮಾತನಾಡು” ಎಂದು ಆತಂಕದಿಂದ ತಿಳಿಸಿದ್ದಾರೆ.
ಫೋನ್ನಲ್ಲೇ ಕೇಳಿಸಿತು ಲಾವಣ್ಯಳ ಕಿರುಚಾಟ: ಅಕ್ಕನ ಮಾತು ಕೇಳಿ ಗೌತಮ್ ತಕ್ಷಣವೇ ತಂಗಿ ಲಾವಣ್ಯಳ ಮೊಬೈಲ್ಗೆ ಕರೆ ಮಾಡಿದ್ದಾರೆ. ಲಾವಣ್ಯ ಫೋನ್ ಸ್ವೀಕರಿಸಿ, “ಚೇತನ್ ಇಲ್ಲಿಗೆ ಬಂದು ಕಿರುಕುಳ ನೀಡುತ್ತಿರುವುದು ನಿಜ…” ಎಂದು ಹೇಳುತ್ತಿದ್ದಂತೆಯೇ, ಆ ಕಡೆಯಿಂದ ಆಕೆಯ ಜೋರಾದ ಕಿರುಚಾಟ ಕೇಳಿಬಂದಿದೆ. ಗಾಬರಿಗೊಂಡ ಗೌತಮ್ ಕೂಡಲೇ ಬಿ.ಸಿ.ರೋಡ್ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸ್ನೇಹಿತ ಅಜಯ್ ಎಂಬವರಿಗೆ ಕರೆ ಮಾಡಿ, ಬಸ್ ನಿಲ್ದಾಣಕ್ಕೆ ಧಾವಿಸುವಂತೆ ತಿಳಿಸಿದ್ದಾರೆ.


ಆಸ್ಪತ್ರೆಗೆ ಬರುವಷ್ಟರಲ್ಲೇ ಹೆಣವಾಗಿದ್ದಳು ತಂಗಿ: ಅಜಯ್ ಅಲ್ಲಿಗೆ ತಲುಪಿ ಕೇವಲ 10 ನಿಮಿಷಗಳಲ್ಲಿ ಗೌತಮ್ ಅವರಿಗೆ ಮರಳಿ ಕರೆ ಮಾಡಿ, “ಲಾವಣ್ಯಳ ಕೊಲೆಯಾಗಿದೆ, ನೀನು ಕೂಡಲೇ ಬಾ” ಎಂದು ಆಘಾತಕಾರಿ ಸುದ್ದಿ ನೀಡಿದ್ದಾರೆ. ಗೌತಮ್ ಅವರು ಊರವರೊಂದಿಗೆ ತಕ್ಷಣವೇ ಬಿ.ಸಿ.ರೋಡ್ಗೆ ಧಾವಿಸುವಷ್ಟರಲ್ಲಿ ಲಾವಣ್ಯರ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ಬಂದು ನೋಡಿದಾಗ ಲಾವಣ್ಯಳ ತಲೆಯ ಹಿಂಭಾಗಕ್ಕೆ ಆಳವಾದ ಗಾಯಗಳಾಗಿ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಲಾವಣ್ಯಳ ಬ್ಯಾಗ್, ರಕ್ತದ ಕಲೆ ಹಾಗೂ ಕೊಲೆಗೆ ಬಳಸಿದ ತಲವಾರು ಬಿದ್ದಿರುವುದನ್ನು ಸ್ನೇಹಿತ ಅಜಯ್ ದೃಢಪಡಿಸಿದ್ದಾರೆ.
ಕೊಲೆಗೆ ಕಾರಣವೇನು?
ಆರೋಪಿ ಚೇತನ್ ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದು, ಕಳೆದ ಕೆಲವು ಸಮಯದಿಂದ ತನ್ನನ್ನು ಪ್ರೀತಿಸುವಂತೆ ಲಾವಣ್ಯಳನ್ನು ಒತ್ತಾಯಿಸುತ್ತಿದ್ದ. ಆದರೆ ಲಾವಣ್ಯ ಆತನ ಪ್ರೀತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಳು. ಇದರಿಂದ ತೀವ್ರ ಕೋಪಗೊಂಡಿದ್ದ ಚೇತನ್, ಗುರುವಾರ ಸಂಜೆ ಲಾವಣ್ಯ ಕೆಲಸ ಮುಗಿಸಿ ಬಸ್ ನಿಲ್ದಾಣಕ್ಕೆ ಬರುವುದನ್ನು ಮುಂಚಿತವಾಗಿಯೇ ತಿಳಿದುಕೊಂಡು, ಆಕೆಯನ್ನು ಕೊಲ್ಲುವ ಉದ್ದೇಶದಿಂದಲೇ ಮನೆಯಿಂದ ತಲವಾರು ತಂದಿದ್ದ.
ಸಂಜೆ 5:30 ರಿಂದ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಬಸ್ ನಿಲ್ದಾಣದಲ್ಲಿ ಲಾವಣ್ಯಳನ್ನು ಹಿಂಬಾಲಿಸಿ ತಡೆದು ನಿಲ್ಲಿಸಿದ ಚೇತನ್, ಮಾರಕಾಸ್ತ್ರವಾದ ತಲವಾರಿನಿಂದ ಆಕೆಯ ತಲೆಯ ಹಿಂಭಾಗಕ್ಕೆ ಘೋರವಾಗಿ ಕಡಿದು ಕೊಲೆ ಮಾಡಿದ್ದಾನೆ. ಬಳಿಕ ತಲವಾರನ್ನು ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾನೆ. ಗೌತಮ್ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಹಂತಕ ಚೇತನ್ನ ಪತ್ತೆ ಹಚ್ಚಿರುವುದಾಗಿ ಮಾಹಿತಿ ಲಭಿಸಿದೆ.
