
ಕಡಬ, ಜು.17: ಮಂಗಳೂರಿನ ಕೆಪಿಟಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿ, ಸಿಐಎಸ್ಎಫ್ ಯೋಧ ಸೀತಾರಾಮ ಗೌಡ (50) ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಅವರ ಹುಟ್ಟೂರು ಕೊಯಿಲದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.


ಸೀತಾರಾಮ ಗೌಡ ಅವರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿ ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ರಜೆಯ ಮೇಲೆ ಊರಿಗೆ ಬಂದಿದ್ದ ಅವರು ಮಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿ ವಾಸ್ತವ್ಯವಿದ್ದರು.
ಜುಲೈ 7ರಂದು ಎಸ್ಐಆರ್ ದಾಖಲಾತಿ ಸಲ್ಲಿಸುವ ಸಲುವಾಗಿ ಕೊಯಿಲದಲ್ಲಿರುವ ಮನೆಗೆ ತೆರಳಿದ್ದ ಅವರು, ಜುಲೈ 8ರಂದು ಮಧ್ಯಾಹ್ನ ಬೈಕ್ನಲ್ಲಿ ಕೊಯಿಲದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಕೆಪಿಟಿ ಸಮೀಪದ ರೆಸಿಡೆನ್ಸಿಯಲ್ ಸ್ಟಾರ್ ಹೋಟೆಲ್ ಬಳಿ ಅಪಘಾತಕ್ಕೀಡಾದರು.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಪಘಾತವು ಬೈಕ್ ಸ್ವಯಂ ಸ್ಕಿಡ್ ಆಗಿ ಸಂಭವಿಸಿದದೆಯೇ ಅಥವಾ ಬೇರೆ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿದೆಯೇ ಎಂಬ ಬಗ್ಗೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ಪತ್ನಿ ರೋಹಿಣಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ
ಮಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಹುಟ್ಟೂರು ಕೊಯಿಲಕ್ಕೆ ತರಲಾಯಿತು. ಮನೆಯಲ್ಲಿ ಸಿಐಎಸ್ಎಫ್ ಸಿಬ್ಬಂದಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ಕಡಬ ತಾಲೂಕು ಆಡಳಿತದ ಉಪತಹಶೀಲ್ದಾರ್ ಸಯ್ಯದುಲ್ಲಾ ಖಾನ್, ಕೊಯಿಲ ಗ್ರಾಮ ಪಂಚಾಯಿತಿ ಪಿಡಿಒ ಸಂದೇಶ್, ನಿವೃತ್ತ ಯೋಧರು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.
ಕುಟುಂಬದವರ ಅಕ್ರಂದನ ಮನಕಲಕುವಂತಿತ್ತು. ಗೋಕುಲನಗರದಿಂದ ಪುತ್ಯೆವರೆಗೆ ಮೃತದೇಹವನ್ನು ಸಾಗಿಸಿದ ಆಂಬುಲೆನ್ಸ್ ಹಿಂದೆ ನೂರಾರು ವಾಹನಗಳಲ್ಲಿ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಆಕಸ್ಮಿಕ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.
