
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರನ್ನು ಸಂಪರ್ಕಿಸುವ ಕೌಕ್ರಾಡಿ ಗ್ರಾಮದ ಪ್ರಮುಖ ರಸ್ತೆಯಾದ ಗೌಡಸಾಗು-ಬರೆಗುಡ್ಡೆ ರಸ್ತೆಯನ್ನು ಸಮರ್ಪಕ ಹಾಗೂ ವೈಜ್ಞಾನಿಕವಾಗಿ ಹೆದ್ದಾರಿಗೆ ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಬರೆಗುಡ್ಡೆ ನಿವಾಸಿಗಳು ಕೌಕ್ರಾಡಿ ಗ್ರಾಮ ಪಂಚಾಯತ್ಗೆ ಪ್ರಮುಖ ಮನವಿ ಪತ್ರ ಸಲ್ಲಿಸಿದ್ದಾರೆ.


ಗೌಡಸಾಗು-ಬರೆಗುಡ್ಡೆ ರಸ್ತೆಯು ಈ ಭಾಗದ ನೂರಾರು ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿನಿತ್ಯ ಅವಲಂಬಿಸಿರುವ ಮುಖ್ಯ ರಸ್ತೆಯಾಗಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಅವೈಜ್ಞಾನಿಕ ಕಾಮಗಾರಿ: ಅಪಘಾತದ ಭೀತಿ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಂಡ ನಂತರ, ಹೊಸ ಹೆದ್ದಾರಿಯ ಮಟ್ಟವು ಹಳೇ ಗೌಡಸಾಗು-ಬರೆಗುಡ್ಡೆ ರಸ್ತೆಯ ಮಟ್ಟಕ್ಕಿಂತ ತೀರಾ ತಗ್ಗು ಪ್ರದೇಶದಲ್ಲಿದೆ. ಇದರಿಂದಾಗಿ ಈ ರಸ್ತೆಯ ಮೂಲಕ ಹೆದ್ದಾರಿ ಪ್ರವೇಶಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಡಿದಾದ ಹಾಗೂ ತಗ್ಗಾದ ಜಂಕ್ಷನ್ನಿಂದಾಗಿ ವಾಹನ ಸಂಚಾರಕ್ಕೆ ದಿನನಿತ್ಯ ಅಡಚಣೆಯಾಗುತ್ತಿದ್ದು, ಈ ಸ್ಥಳದಲ್ಲಿ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.


ಹೆದ್ದಾರಿ ಪ್ರಾಧಿಕಾರವು ಇತರೆ ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳನ್ನು ಹೆದ್ದಾರಿಗೆ ವೈಜ್ಞಾನಿಕವಾಗಿ ಸಂಪರ್ಕಿಸುವ ಜಂಕ್ಷನ್ ವ್ಯವಸ್ಥೆ ಮಾಡಿರುವ ಮಾದರಿಯಲ್ಲೇ, ಈ ರಸ್ತೆಗೂ ಸೂಕ್ತ ಸಂಪರ್ಕ ಕಲ್ಪಿಸಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಹಾಗೂ ಪ್ರದೇಶ ಕಲ್ಯಾಣಾಧಿಕಾರಿಗಳಿಗೂ ಪತ್ರದ ಪ್ರತಿಗಳನ್ನು ರವಾನಿಸಲಾಗಿದೆ. ಕೌಕ್ರಾಡಿ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಸಿದ್ದೀಕ್ ಎಂ., ಸಮದ್, ಆಶ್ರಫ್, ಹೈದರ್, ಆದಂ, ಅಯ್ಯೂಬ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (PDO) ಮೋಹನ್ಕುಮಾರ್ ಹಾಗೂ ಕಾರ್ಯದರ್ಶಿ ದೇವಿಕಾ ಅವರು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಗ್ರಾ.ಪಂ.ನಿಂದ ಪತ್ರ
ಸಾರ್ವಜನಿಕರ ಈ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣವೇ ಸ್ಪಂದಿಸಿರುವ ಕೌಕ್ರಾಡಿ ಗ್ರಾ.ಪಂ. ಪಿಡಿಒ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಅಧಿಕೃತ ಪತ್ರವೊಂದನ್ನು ಬರೆದಿದ್ದಾರೆ. ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಶಾಂತಿಬೆಟ್ಟು-ಗೌಡ್ಸಾಗು, ಗೌಡ್ಸಾಗ್-ಬರೆಗುಡ್ಡೆ, ಹಾಗೂ ಹೊಸಮಜಲು ಕಾಲೋನಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ‘ಜಂಕ್ಷನ್ ರಸ್ತೆ’ಗಳ ಪಟ್ಟಿಯಲ್ಲಿ ಬಿಟ್ಟುಹೋಗಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ ನೂರಾರು ಜನರಿಗೆ ತೊಂದರೆಯಾಗುತ್ತಿರುವುದನ್ನು ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಬಿಟ್ಟುಹೋಗಿರುವ ಈ ಸಂಪರ್ಕ ರಸ್ತೆಗಳಿಗೆ ತಕ್ಷಣವೇ ಕಾಂಕ್ರೀಟ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಂಚಾಯತ್ ಆಡಳಿತವು ಹೆದ್ದಾರಿ ಪ್ರಾಧಿಕಾರವನ್ನು ಬಲವಾಗಿ ಒತ್ತಾಯಿಸಿದೆ.
