
ಕಡಬ: ತಾಲೂಕು ಕೇಂದ್ರವಾಗಿ ರೂಪಗೊಂಡ ಬಳಿಕ ಕಡಬದಲ್ಲಿ ಪ್ರತ್ಯೇಕ ನ್ಯಾಯಾಲಯ ಪ್ರಾರಂಭಿಸಬೇಕು ಎನ್ನುವ ಈ ಭಾಗದ ಸಾರ್ವಜನಿಕರ ಹಾಗೂ ವಕೀಲರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಜೂನ್ ತಿಂಗಳ 2ನೇ ಮಂಗಳವಾರದಂದು ಖಾಸಗಿ ಮಾಲೀಕತ್ವದ ‘ಗಣೇಶ್ ಬಿಲ್ಡಿಂಗ್’ನಲ್ಲಿ ಬಾಡಿಗೆ ನೆಲೆಯಲ್ಲಿ ನೂತನ ನ್ಯಾಯಾಲಯ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.


ಇತ್ತೀಚೆಗಷ್ಟೇ ಕಡಬಕ್ಕೆ ಆಗಮಿಸಿದ್ದ ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಬಸವರಾಜ್ ಅವರು, ಗಣೇಶ್ ಬಿಲ್ಡಿಂಗ್ನ ಎರಡನೇ ಮಹಡಿಯಲ್ಲಿ ನ್ಯಾಯಾಲಯ ಪ್ರಾರಂಭಿಸಲು ನಡೆಸಿರುವ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು.
ವಾರದಲ್ಲಿ ಎರಡು ದಿನ ಕಲಾಪ: ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ನ್ಯಾಯಾಧೀಶರು “ಜೂನ್ 2ನೇ ಮಂಗಳವಾರದಂದು ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂಲಭೂತ ಸೌಕರ್ಯಗಳ ನವೀಕರಣ ಕಾರ್ಯ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಚಾಲನೆ ಸಿಗಲಿದೆ. ಆರಂಭಿಕ ಹಂತದಲ್ಲಿ ವಾರದಲ್ಲಿ ಎರಡು ದಿನ, ಅಂದರೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ನ್ಯಾಯಾಲಯದ ಕಲಾಪಗಳು ನಡೆಯಲಿವೆ,” ಎಂದು ತಿಳಿಸಿದರು.
ಸ್ವಂತ ಕಟ್ಟಡಕ್ಕೆ 3 ಎಕರೆ ಜಾಗ ಮೀಸಲು: ನ್ಯಾಯಾಲಯಕ್ಕೆ ಸ್ವಂತ ಸಂಕೀರ್ಣ ನಿರ್ಮಾಣ ಮಾಡುವ ದೃಷ್ಟಿಯಿಂದ ಕಡಬದ ಮಿನಿ ವಿಧಾನ ಸೌಧದ (ತಾಲೂಕು ಕಚೇರಿ) ಬಳಿ ಈಗಾಗಲೇ 3 ಎಕರೆ ಜಾಗವನ್ನು ಗುರುತಿಸಿ ಮೀಸಲಿಡಲಾಗಿದೆ. ಹೈಕೋರ್ಟ್ ಸೂಚನೆಯಂತೆ ಕಟ್ಟಡ ಮಾಲೀಕರು ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರ ಮಧ್ಯೆ ಒಪ್ಪಂದ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ನೂತನ ಸರ್ಕಾರಿ ಕಟ್ಟಡ ನಿರ್ಮಾಣವಾಗುವ ತನಕ ಬಾಡಿಗೆ ಕಟ್ಟಡದಲ್ಲೇ ಕಾರ್ಯಕಲಾಪಗಳು ಮುಂದುವರಿಯಲಿವೆ.


ಪುತ್ತೂರು ನ್ಯಾಯಾಲಯದಿಂದ ಕಡತಗಳ ವರ್ಗಾವಣೆ: ಇದುವರೆಗೆ ಕಡಬ ತಾಲೂಕಿನ ವ್ಯಾಪ್ತಿಯ ಸಾರ್ವಜನಿಕರು ನ್ಯಾಯಾಲಯದ ಕೆಲಸಗಳಿಗಾಗಿ ದೂರದ ಪುತ್ತೂರು ಅಥವಾ ಸುಳ್ಯಕ್ಕೆ ಅಲೆಯಬೇಕಾಗಿತ್ತು. ಇದೀಗ ಹೈಕೋರ್ಟ್ ಅನುಮತಿ ಸಿಕ್ಕಿರುವುದರಿಂದ, ಪ್ರಸ್ತುತ ಪುತ್ತೂರು ನ್ಯಾಯಾಲಯದಲ್ಲಿದ್ದ ಕಡಬ ತಾಲೂಕಿಗೆ ಸಂಬಂಧಿಸಿದ ಪ್ರಕರಣಗಳ ಕಡತಗಳನ್ನು ಈಗಾಗಲೇ ಬೇರ್ಪಡಿಸಿ ಪ್ರತ್ಯೇಕಿಸಲಾಗಿದೆ. ಇನ್ಮುಂದೆ ಈ ಎಲ್ಲಾ ಪ್ರಕರಣಗಳ ವಿಚಾರಣೆ ಕಡಬದಲ್ಲೇ ನಡೆಯಲಿದೆ.
ಸಮಯ ಮತ್ತು ಹಣದ ಉಳಿತಾಯ: ಕಡಬದಲ್ಲೇ ನ್ಯಾಯಾಲಯ ಸ್ಥಾಪನೆಯಾಗುತ್ತಿರುವುದರಿಂದ ಸ್ಥಳೀಯ ಸಾರ್ವಜನಿಕರಿಗೆ ಮತ್ತು ನ್ಯಾಯವಾದಿಗಳಿಗೆ ದೂರದ ಪ್ರಯಾಣ ತಪ್ಪಲಿದ್ದು, ಬಹಳಷ್ಟು ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಜೊತೆಗೆ ಸ್ಥಳೀಯವಾಗಿ ಶೀಘ್ರ ನ್ಯಾಯದಾನ ದೊರೆಯಲು ಇದು ಸಹಕಾರಿಯಾಗಲಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ಥಳ ಪರಿಶೀಲನೆಯ ಈ ಸಂದರ್ಭದಲ್ಲಿ ಕಡಬದ ನ್ಯಾಯವಾದಿಗಳಾದ ಲೋಕೇಶ್ ಎಂ.ಜೆ., ಶಿವಪ್ರಸಾದ್ ಪುತ್ತಿಲ, ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಕೃಷ್ಣಪ್ಪ ಗೌಡ ಕಕ್ವೆ, ಮನೋಹರ ಸಬಳೂರು, ಕೌಶಿಕ್ ಆಲಂಕಾರು, ಅರ್ಪಿತಾ ಪಿ., ಸುಮನಾ ಎಂ , ಕಟ್ಟಡದ ಮಾಲೀಕ ಸುಂದರ ಗೌಡ ಮಂಡೆಕರ ಹಾಗೂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
