ಇಚಿಲಂಪಾಡಿ ಬಳಿ ಕಾರು – ಟಿಟಿ ನಡುವೆ ಮುಖಾಮುಖಿ ಡಿಕ್ಕಿ; ತಂದೆ-ಮಗ ಸೇರಿ ಹಲವರಿಗೆ ಗಾಯ

kadaba times

ಕಡಬ: ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಕಾರು ಮತ್ತು ಟ್ರಾವೆಲರ್ (TT) ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

kadaba times
uniq

ಕೊಂಬಾರು ಗ್ರಾಮದ ನಿವಾಸಿ ಶರಣ್ (25) ಹಾಗೂ ಅವರ ತಂದೆ ಸುಬ್ರಾಯ (52) ಅವರು ದಿನಾಂಕ 31-05-2026ರಂದು ಬೆಳಿಗ್ಗೆ ತಮ್ಮ ಫೋರ್ಡ್ ಕಾರಿನಲ್ಲಿ (KA19ME3981) ದಿನಸಿ ಸಾಮಗ್ರಿ ಖರೀದಿಸಲು ಕೊಂಬಾರಿನಿಂದ ಇಚಿಲಂಪಾಡಿ ಕಡೆಗೆ ಹೊರಟಿದ್ದರು. ಧರ್ಮಸ್ಥಳ-ಸುಬ್ರಹ್ಮಣ್ಯ ಡಾಮಾರು ರಸ್ತೆಯ ಮೀನಾಡಿ ಎಂಬಲ್ಲಿನ ತಿರುವು ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ (ಧರ್ಮಸ್ಥಳ ಕಡೆಯಿಂದ) ಬರುತ್ತಿದ್ದ ಟಿಟಿ ವಾಹನ (KA02AF4138) ರಸ್ತೆಯ ತೀರ ಬಲಬದಿಗೆ ಬಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಟಿಟಿ ವಾಹನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಶರಣ್ ಅವರ ತಲೆ ಮತ್ತು ಬಲಗಣ್ಣಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ಅವರ ತಂದೆ ಸುಬ್ರಾಯ ಅವರ ಹಣೆ, ಮೂಗು ಹಾಗೂ ಹಲ್ಲಿಗೆ ಬಲವಾದ ಪೆಟ್ಟು ಬಿದ್ದಿದೆ.

kadaba times
kadaba times

ಇನ್ನು ಅಪಘಾತ ಎಸಗಿದ ಟಿಟಿ ವಾಹನದಲ್ಲಿದ್ದ ಪ್ರಯಾಣಿಕರಾದ ಚಿಕ್ಕಣ್ಣ, ಜಯಮ್ಮ, ಮಂಜುನಾಥ್ ಹಾಗೂ ಇತರರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಶರಣ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಟಿಟಿ ಚಾಲಕ ಲೋಹಿತ್ ವಿರುದ್ಧ ಅಪರಾಧ ಕ್ರಮಾಂಕ 66/2026, ಕಲಂ: 281, 125(a)-BNS-2023 ರನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Latest Articles