
ಕಡಬ: ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಎಂಬಲ್ಲಿ ತೋಟವೊಂದರಲ್ಲಿ ಅಕ್ರಮವಾಗಿ ಗೋವಧೆ ನಡೆಸುತ್ತಿದ್ದ ಜಾಲವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತರನ್ನು ಕೆ. ಅಬ್ದುಲ್ ರಫೀಕ್ (37), ಅದ್ರಾಮ ಮಂತೂರು (41) ಮತ್ತು ಅಬ್ದುಲ್ ಖಾದರ್ ಪಣೆಮಜಲು (57) ಎಂದು ಗುರುತಿಸಲಾಗಿದೆ.
ಮೇ 29ರ ಸೆಂಜೆ ಕಡಬದ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದ ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾದ (PSI) ಸಂತೋಷ್ ಬಿ.ಪಿ. ಅವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡ ಜಂಟಿಯಾಗಿ ಸ್ಥಳದ ಮೇಲೆ ದಾಳಿ ನಡೆಸಿದೆ.


ಪೊಲೀಸರು ದಾಳಿ ನಡೆಸಿದಾಗ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಗೋವಧೆ ನಡೆಸಿರುವುದು ದೃಢಪಟ್ಟಿದೆ.
ಪೊಲೀಸರು ಸ್ಥಳದಲ್ಲಿದ್ದ ಜಾನುವಾರು ಮಾಂಸ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026 ರಂತೆ, ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2023′ರ ಕಲಂ 4, 7, 12 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
