
ಕಡಬ: ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು, ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನಿತ್ಯ ನರಕಯಾತನೆಗೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ‘ಸೇಡಿಗುಂಡಿ – ಅಡ್ಡಗದ್ದೆ ಕಾಲೇಜು ರಸ್ತೆ’ಯ ಚರಂಡಿ ದುರಸ್ತಿಗೆ ಕೊನೆಗೂ ಪ.ಪಂ ಮುಂದಾಗಿದೆ. ಆದರೆ, ಈ ತಾತ್ಕಾಲಿಕ ಕಾಮಗಾರಿಗೆ ಜೆಸಿಬಿ ಬಂದು ಕೆಲಸ ಆರಂಭಿಸುತ್ತಿದ್ದಂತೆ, ಸ್ಥಳೀಯ ನಿವಾಸಿಯೊಬ್ಬರು ಪಟ್ಟಣ ಪಂಚಾಯತ್ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


“ಸಜ್ಜಿಗೆ, ಉಪ್ಪಿಟ್ಟು, ಶೀರಾ ತಿನ್ನಲು ಮಾತ್ರ ಮೀಟಿಂಗ್ ಮಾಡ್ತಾರೆ!” : ಅತ್ತ ಜೆಸಿಬಿ ಬಂದು ಕೆಲಸ ಆರಂಭಿಸುತ್ತಿದ್ದಂತೆ ಇತ್ತ ಸ್ಥಳೀಯ ನಿವಾಸಿಯಾದ ಸೈಯ್ಯದ್ ಕಲೀಲ್ ಎಂಬುವವರು ಕೈಯಲ್ಲಿ ಹಾರೆ ಹಿಡಿದುಕೊಂಡು ರಸ್ತೆ ಬದಿಯಲ್ಲಿ ನಿಂತು ಪ.ಪಂ. ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರಸ್ತೆಯಲ್ಲಿ ದಿನಕ್ಕೆ 18 ಶಾಲಾ ವಾಹನಗಳು ಸಂಚರಿಸುತ್ತವೆ. ಏಳು ಜನ ಕೌನ್ಸಿಲರ್ಗಳು ಇಲ್ಲೇ ಓಡಾಡುತ್ತಾರೆ, ಉಪಾಧ್ಯಕ್ಷರ ಏರಿಯಾ ಕೂಡ ಇದೇ ಆಗಿದೆ. ಇವರು ತುರ್ತು ಮೀಟಿಂಗ್ ಮಾಡ್ತಾರೆ, ಕಾಪಿ-ಚಾ ಕುಡಿದು, ಸಜ್ಜಿಗೆ, ಉಪ್ಪಿಟ್ಟು, ಶೀರಾ ತಿಂದು ಹೊರಡುವುದು ಮಾತ್ರ ಇವರ ಕೆಲಸ. ಕಾಮಗಾರಿ ಮಾಡ್ತೇವೆ ಎಂದು ಮಾರ್ಚ್ ಆಯ್ತು, ಏಪ್ರಿಲ್, ಮೇ, ಜೂನ್ ಕಳೆಯಿತು. ಇದು ನಾವು ಮಾಡಿದ ಕರ್ಮ, ಇವರ ಮನೆ ಮನೆಗೆ ಹೋಗಿ ವೋಟ್ ಕೇಳಿದ್ದಕ್ಕೆ ನಮಗೆ ಸಿಕ್ಕ ಪ್ರತಿಫಲ” ಎಂದು ಅವರು ವಿಡಿಯೋದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ವಾಹನ ಸವಾರರಲ್ಲಿ ಸಹಕಾರ ಕೋರುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ನಾಲ್ಕೈದು ವರ್ಷಗಳ ನರಕಯಾತನೆ: ಸೇಡಿಗುಂಡಿ-ಅಡ್ಡಗದ್ದೆ ಕಾಲೇಜು ರಸ್ತೆಯು ಕಳೆದ ನಾಲ್ಕೈದು ವರ್ಷಗಳಿಂದ ಸಂಪೂರ್ಣವಾಗಿ ಗುಂಡಿಬಿದ್ದು ಹಾಳಾಗಿತ್ತು. ಮಳೆಗಾಲದಲ್ಲಂತೂ ಈ ರಸ್ತೆ ಕೆರೆಯಂತಾಗಿ ಮಾರ್ಪಡುತ್ತಿದ್ದು, ನಿತ್ಯ ಸಂಚರಿಸುವ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.
ಸುಮಾರು 30 ವರ್ಷಗಳ ಹಿಂದೆ ಜಿಲ್ಲಾ ಪರಿಷತ್ನ ವಿಶೇಷ ಅನುದಾನದಲ್ಲಿ ಈ 1 ಕಿಲೋಮೀಟರ್ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗಿತ್ತು. ಆದರೆ, ಕಳೆದ 4 ವರ್ಷಗಳಿಂದ ಇದು ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿದ ಬಳಿಕ ಸಮರ್ಪಕ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ವಾಹನ ಸವಾರರು ಬಿದ್ದು ಹಲವು ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಕಡಬ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಮತ್ತು ಸ್ಥಳೀಯ ಸಾರ್ವಜನಿಕರು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತ್ಗೆ ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣವೇ ರಸ್ತೆ ಸರಿಪಡಿಸುವಂತೆ ಸಾರ್ವಜನಿಕ ಮನವಿ ಸಲ್ಲಿಸಿದ್ದರು.
KMJC ಮತ್ತು ಸಭಾಧ್ಯಕ್ಷ ಯು.ಟಿ. ಖಾದರ್ ಮಧ್ಯಸ್ಥಿಕೆ: ಸ್ಥಳೀಯ ಮಟ್ಟದಲ್ಲಿ ಪಟ್ಟಣ ಪಂಚಾಯತ್ನಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದಿದ್ದಾಗ, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ (KMJC) ಕಾರ್ಯದರ್ಶಿಯೂ ಆಗಿರುವ ಅಲ್-ಹಾಜಿ ಸಯ್ಯದ್ ಮೀರಾ ಸಾಹೇಬ್ ಅವರು ಈ ಸಮಸ್ಯೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದರು. ವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್ ಫರೀದ್ ಅವರ ಗಮನಕ್ಕೆ ಈ ವಿಷಯವನ್ನು ತಂದು, ಅವರ ಮೂಲಕ ಪೌರಾಡಳಿತ ಸಚಿವರಿಂದ ಅಗತ್ಯ ಪ್ರಕ್ರಿಯೆಗಳಿಗೆ ವೇಗ ನೀಡಿದರು. ಕಳೆದ 8 ತಿಂಗಳುಗಳಿಂದ ಸತತ ಪತ್ರವ್ಯವಹಾರಗಳು ನಡೆಯುತ್ತಿದ್ದರೂ ಸ್ಥಳೀಯವಾಗಿ ನಿರೀಕ್ಷಿತ ಪ್ರಗತಿ ಕಾಣದಿದ್ದಾಗ, ಮೇ 15, 2026 ರಂದು KMJC ನಿಯೋಗವು ನೇರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರನ್ನು ಭೇಟಿಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ವಿಶೇಷ ಯೋಜನೆಯಡಿ ತುರ್ತು ಅನುದಾನ ಬಿಡುಗಡೆ ಮಾಡುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿತು.


SFC ಬದಲಿಗೆ CMUDP ಯೋಜನೆಯಡಿ ಅನುದಾನ: ಸಾರ್ವಜನಿಕರ ಹಿತದೃಷ್ಟಿಯಿಂದ ಸಲ್ಲಿಕೆಯಾದ ಈ ಮನವಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳ ಸಚಿವಾಲಯವು (ಪತ್ರ ಸಂಖ್ಯೆ: E-CM/12473961/26), ರಸ್ತೆಯ ದುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಪೌರಾಡಳಿತ ನಿರ್ದೇಶನಾಲಯದ ಸಲಹೆಯಂತೆ, ಈ ಹಿಂದೆ ನಿಗದಿಪಡಿಸಲಾಗಿದ್ದ ಸಾಧಾರಣ ಎಸ್ಎಫ್ಸಿ (SFC) ಅನುದಾನದ ಬದಲಾಗಿ, ಪ್ರಮುಖ ಮತ್ತು ಬೃಹತ್ ಯೋಜನೆಯಾದ ಸಿ.ಎಂ.ಯು.ಡಿ.ಪಿ. (CMUDP – ಮುಖ್ಯಮಂತ್ರಿಗಳ ನಗರೋತ್ಥಾನ/ನಗರಾಭಿವೃದ್ಧಿ ಯೋಜನೆ) ಅಡಿಯಲ್ಲಿ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ.
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (OSD) ಎಂ. ಶಾಂತಪ್ಪ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಲಿಖಿತ ಆದೇಶ ರವಾನಿಸಿದ್ದು, “ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮನವಿಯನ್ನು ಮಾನವೀಯ ನೆಲೆಯಲ್ಲಿ ತುರ್ತಾಗಿ ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಕಡಕ್ ಸೂಚನೆ ನೀಡಿದ್ದಾರೆ.
ಸಾವಿರಾರು ಜನರ ಏಕೈಕ ಆಸರೆ :ಈ ರಸ್ತೆಯು ಕಡಬದ ಹೈಸ್ಕೂಲ್, ಜೂನಿಯರ್ ಕಾಲೇಜು, ಸರಸ್ವತಿ ಕಾಲೇಜು, ಎಸ್ಸಿ/ಎಸ್ಟಿ ಹಾಸ್ಟೆಲ್, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಹಾಗೂ ಕುಂಬಾರರ ಕಾಲೋನಿ, ಪಿಜಕ್ಕಳ ಮತ್ತು ಕೋಡಿಂಬಾಳ ಗ್ರಾಮಗಳ ಸಾವಿರಾರು ಜನರಿಗೆ ಏಕೈಕ ಮುಖ್ಯ ರಸ್ತೆಯಾಗಿದೆ. ಇದೀಗ ಪಟ್ಟಣ ಪಂಚಾಯತ್ ತಾತ್ಕಾಲಿಕ ಚರಂಡಿ ದುರಸ್ತಿ ಕೈಗೆತ್ತಿಕೊಂಡಿದ್ದರೂ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ವಿಶೇಷ ಅನುದಾನದ ಮೂಲಕ ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಶಾಶ್ವತ ನೆಮ್ಮದಿ ಸಿಗುವ ನಿರೀಕ್ಷೆ ಮೂಡಿದೆ.
