
ನೆಲ್ಯಾಡಿ: ಗ್ರಾ.ಪಂ. ವ್ಯಾಪ್ತಿಯ ಬೆಥನಿ-ಪಡ್ಡಡ್ಕ-ಪಿಜಿನಡ್ಕ ಮೂಲಕ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ, ತಾವು ಏಕಾಏಕಿ ರಸ್ತೆಯನ್ನು ಬಂದ್ ಮಾಡಿಲ್ಲ ಎಂದು ಜಮೀನಿನ ಮಾಲಕರೂ, ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ವಿನೋಜ್ ಪಿ.ಜೆ. ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.


ಸರ್ವೆ ನಂಬರ್ 9/24ರ ಪಟ್ಟಾ ಜಾಗದ ವಿವಾದ: ಪಾಲೆತ್ತಡಿ ಎಂಬಲ್ಲಿ ತಮ್ಮ ಸ್ವಂತ ಪಟ್ಟಾ ಜಾಗವಾದ ಸರ್ವೆ ನಂಬರ್ ೯/೨೪ರ ಮೂಲಕ ಈ ರಸ್ತೆಯು ಹಾದುಹೋಗಿದೆ. ಆದರೆ, ಸದ್ರಿ ರಸ್ತೆಯು ಪಂಚಾಯತ್ಗೆ ಸೇರಿದ್ದೇ ಅಥವಾ ಖಾಸಗಿ ರಸ್ತೆಯೇ ಎಂಬುದರ ಕುರಿತು ನೆಲ್ಯಾಡಿ ಗ್ರಾಮ ಪಂಚಾಯತ್ನಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಈ ರಸ್ತೆ ಹಾದುಹೋಗಿರುವ ಜಾಗ ಅತಿಕ್ರಮಣ ಆಗಿರುವ ಬಗ್ಗೆ ಈಗಾಗಲೇ ಗ್ರಾ.ಪಂ. ಪಿಡಿಒ, ಗ್ರಾಮ ಆಡಳಿತಾಧಿಕಾರಿ ಹಾಗೂ ಭೂಮಾಪಕರು ಜಂಟಿ ತನಿಖೆ ನಡೆಸಿ ತಹಶೀಲ್ದಾರ್ ಅವರಿಗೆ ವರದಿಯನ್ನೂ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸರ್ವೆಯಲ್ಲಿ ಬಯಲಾದ ಪಕ್ಕದ ಜಮೀನಿನ ಮಾಲಕರ ಒತ್ತುವರಿ: “ನಮ್ಮ ಖಾಸಗಿ ಜಮೀನಿನ ಮೂಲಕ ಹಾದುಹೋಗಿರುವ ಈ ರಸ್ತೆಯು ನಮ್ಮ ಜಾಗದ ಕಂಪೌಂಡ್ನ ಹೊರಭಾಗದಲ್ಲಿದೆ. ಮೇ ೯ರಂದು ಭೂಮಾಪನಾ ಇಲಾಖೆ ನಡೆಸಿದ ಅಧಿಕೃತ ಸರ್ವೆಯಲ್ಲಿ, ಪಕ್ಕದ ಜಮೀನಿನ ಮಾಲಕರು ಸದ್ರಿ ರಸ್ತೆಯ ಅಂಚಿನವರೆಗೆ ತಂತಿ ಬೇಲಿ ಹಾಕಿ ಸಾರ್ವಜನಿಕ ರಸ್ತೆಯನ್ನು ಕಿರಿದು ಮಾಡಿರುವುದು ಬೆಳಕಿಗೆ ಬಂದಿದೆ. ಸರ್ವೆ ಅಧಿಕಾರಿಗಳು ಅತಿಕ್ರಮಣ ಆಗಿರುವ ೦.೦೩ ಎಕ್ರೆ ಜಮೀನನ್ನು ನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಷೆಯಲ್ಲಿ ತೋರಿಸಲಾದ ರಸ್ತೆಯನ್ನು ಊರ್ಜಿತಗೊಳಿಸಬೇಕೆಂದು ಗ್ರಾ.ಪಂ.ಗೆ ತಿಳಿಸಲಾಗಿದೆ” ಎಂದು ವಿನೋಜ್ ಪಿ.ಜೆ ವಿವರಿಸಿದ್ದಾರೆ.


ಸಾರ್ವಜನಿಕ ರಸ್ತೆಗಾಗಿ ಜಾಗ ಬಿಡಲು ಸೈನಿಕ ಸಿದ್ಧ, ಆದರೆ… “ಪಕ್ಕದ ಜಮೀನಿನ ಮಾಲಕರು ಅತಿಕ್ರಮಿಸಿಕೊಂಡಿರುವ ನನ್ನ ಖಾಸಗಿ ಜಮೀನಿನ ೬ ಮೀಟರ್ ಅಗಲದ ಜಾಗದ ಪೈಕಿ, ೫ ಅಡಿ ಜಾಗವನ್ನು ಸಾರ್ವಜನಿಕ ರಸ್ತೆಗಾಗಿ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಹಾಗೆ ಮಾಡಿದಲ್ಲಿ ಮಾತ್ರ ಸದ್ರಿ ರಸ್ತೆಯನ್ನು ಊರ್ಜಿತದಲ್ಲಿಡಲಾಗುವುದು. ಒಂದು ವೇಳೆ ಅವರು ಇದಕ್ಕೆ ಒಪ್ಪದಿದ್ದಲ್ಲಿ, ಭೂ ಮಾಪನಾ ಇಲಾಖೆ ಈ ಹಿಂದೆ ಗಡಿಗುರುತು ಮಾಡಿಕೊಟ್ಟ ಜಾಗವನ್ನು ನ್ಯಾಯಯುತವಾಗಿ ಹಿಂಪಡೆದು, ನನ್ನ ಖಾಸಗಿ ಜಮೀನಿನಲ್ಲಿ ಹಾದು ಹೋಗುವ ರಸ್ತೆಯನ್ನು ಮುಚ್ಚಬೇಕಾಗುತ್ತದೆ ಎಂದು ಇಲಾಖೆಗೆ ತಿಳಿಸಿದ್ದೇನೆ. ಆದುದರಿಂದ ಪಕ್ಕದ ಜಮೀನಿನ ಮಾಲಕರು ತಮ್ಮ ಬೇಲಿಯನ್ನು ೫ ಅಡಿ ಹಿಂದಕ್ಕೆ ಹಾಕಿ, ನಕ್ಷೆಯಲ್ಲಿ ಕಾಣಿಸಿದ ಸಾರ್ವಜನಿಕ ರಸ್ತೆಯನ್ನು ಉಳಿಸಿಕೊಳ್ಳಲು ಗ್ರಾ.ಪಂ.ನಿಂದ ಸೂಚನೆ ನೀಡಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಪಂಚಾಯತ್ ಸಭೆಗೆ ಪ್ರತಿವಾದಿ ಗೈರು; ಕ್ರಮ ಜರುಗಿಸದ ಆಡಳಿತ: ಈ ರಸ್ತೆ ಗೊಂದಲದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಚರ್ಚಿಸಲು ಮೇ ೨೬ರಂದು ಅಪರಾಹ್ನ ನೆಲ್ಯಾಡಿ ಗ್ರಾ.ಪಂ. ಕಚೇರಿಯಲ್ಲಿ ಉಭಯ ಪಾರ್ಟಿಗಳ ಸಭೆ ಕರೆಯಲಾಗಿತ್ತು. ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಎರಡೂ ಕಡೆಯವರಿಗೆ ಸೂಚನೆ ನೀಡಲಾಗಿದ್ದರೂ, ಪಕ್ಕದ ಜಮೀನಿನ ಮಾಲಕರು ಸಭೆಗೆ ಗೈರುಹಾಜರಾಗಿದ್ದರು. ಸಭೆಯಲ್ಲಿದ್ದ ರಸ್ತೆ ಬಳಕೆದಾರರು ರಸ್ತೆಯ ಗೊಂದಲದ ಬಗ್ಗೆ ವಿವರಣೆ ನೀಡಿದ್ದು, ಪಕ್ಕದ ಜಮೀನಿನ ಮಾಲಕರು ಒತ್ತುವರಿ ಆಗಿರುವ ಜಮೀನನ್ನು ರಸ್ತೆಗಾಗಿ ಬಿಟ್ಟುಕೊಡಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಈ ನಿರ್ಣಯದ ಹೊರತಾಗಿಯೂ ಪಂಚಾಯತ್ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ನಾವು ಏಕಾಏಕಿಯಾಗಿ ರಸ್ತೆಯನ್ನು ಬಂದ್ ಮಾಡಿಲ್ಲ ಎಂದು ಲೆಫ್ಟಿನೆಂಟ್ ಕರ್ನಲ್ ವಿನೋಜ್ ಪಿ.ಜೆ. ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
