ರಾಜ್ಯದಲ್ಲಿ ಹೊಸ ಸರ್ಕಾರ ರಚನೆ: ಸಚಿವ ಸ್ಥಾನಕ್ಕಾಗಿ ಹಿರಿಯ-ಕಿರಿಯ ಶಾಸಕರ ಫೈಟ್

kadaba times

ಆರೇಳು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಕಾಂಗ್ರೆಸ್‌ನ ನಾಯಕತ್ವ ಬಿಕ್ಕಟ್ಟಿನ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಅತ್ಯಂತ ಚುರುಕುಗೊಂಡಿವೆ.

kadaba times
uniq
ಜೂನ್ 3 ರಂದು ಸರಳ ಪ್ರಮಾಣ ವಚನ ಸ್ವೀಕಾರ

ರಾಜಭವನದ ಗಾಜಿನ ಮನೆಯಲ್ಲಿ ಜೂನ್ 3ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸರಳವಾಗಿ ನೆರವೇರಲಿದೆ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಅನ್ಯ ಕಾರ್ಯನಿಮಿತ್ತ ಮೇ 31 ಮತ್ತು ಜೂನ್ 1ರಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 3ಕ್ಕೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವ ಮೊದಲೇ ಡಿ.ಕೆ.ಶಿವಕುಮಾರ್ ಅವರು ‘ಲೋಕಭವನ’ಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ, ಕಾರ್ಯಕ್ರಮದ ಸಮಾಲೋಚನೆ ನಡೆಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹಿರಿಯ-ಕಿರಿಯ ಶಾಸಕರ ಫೈಟ್!

ನೂತನ ಸಿಎಂ ಆಯ್ಕೆಯ ಬೆನ್ನಲ್ಲೇ ಇದೀಗ ಸಚಿವ ಸಂಪುಟ ಸೇರ್ಪಡೆಗೆ ಹಿರಿಯ ಮತ್ತು ಕಿರಿಯ ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೂನ್ 3 ರಂದು ಡಿ.ಕೆ.ಶಿವಕುಮಾರ್ ಅವರೊಂದಿಗೆ ಹತ್ತಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಕ್ರಿಯಾಶೀಲ ಹಾಗೂ ಹಿರಿಯ ನಾಯಕರಿಗೆ ಮತ್ತೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಸಚಿವರ ರೇಸ್‌ನಲ್ಲಿರುವ ಪ್ರಮುಖ ನಾಯಕರು: ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಬಿ.ನಾಗೇಂದ್ರ, ಲಕ್ಷ್ಮಣ್ ಸವದಿ, ರೂಪಕಲಾ ಶಶಿಧರ್ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನುಳಿದಂತೆ ಯು.ಟಿ.ಖಾದರ್ ಅಥವಾ ಎನ್.ಎ.ಹಾರಿಸ್ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ರಾಷ್ಟ್ರೀಯ ನಾಯಕರ ದಂಡು: ಗಣ್ಯರಿಗೆ ಆಹ್ವಾನ

kadaba times
kadaba times

ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಪ್ರಮುಖ ರಾಜಕೀಯ ನಾಯಕರನ್ನು ಆಹ್ವಾನಿಸಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕೇರಳ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಫುಲ್ ಆಕ್ಟಿವ್ ಆದ ಡಿಕೆಶಿ: ಮುಂದಿನ ನಡೆ ಏನು?

ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೆಹಲಿ ಮಟ್ಟದ ನಾಯಕರೊಂದಿಗೆ ಸಚಿವ ಸಂಪುಟ ರಚನೆ ಕುರಿತು ಚರ್ಚೆಗಳು ಆರಂಭವಾಗಿವೆ. ಇನ್ನು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದರಿಂದ ತೆರವಾಗಲಿರುವ ‘ಕೆಪಿಸಿಸಿ ಅಧ್ಯಕ್ಷ’ ಗಾದಿಗೆ ಯಾರನ್ನು ಕೂರಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

Related Articles

Latest Articles