ಕಳಾರದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ ಹೋರಾಟ ಸಮಿತಿ

kadaba times

ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಳಾರ ತಿಮರಡ್ಡದಲ್ಲಿ ಎಸ್‌ಟಿಪಿ/ಎಫ್‌ಎಸ್‌ಟಿಪಿ ಘಟಕ ಸ್ಥಾಪನೆಗೆ ಕಳಾರ ಪರಿಸರ ಸಂರಕ್ಷಣ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜನವಸತಿ ಪ್ರದೇಶದಲ್ಲಿ ಘಟಕ ನಿರ್ಮಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

kadaba times
uniq

ಕಡಬ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಂದನೇ ವಾರ್ಡಿನ ಕಳಾರ ತಿಮರಡ್ಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕವು (STP/FSTP) ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಹಾನಿಯುಂಟು ಮಾಡಲಿದೆ. ಆದ್ದರಿಂದ ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು, ಇಲ್ಲದಿದ್ದರೆ ಉಗ್ರ ಕಾನೂನು ಹೋರಾಟ ನಡೆಸಲಾಗುವುದು ಎಂದು ಕಳಾರ ಪರಿಸರ ಸಂರಕ್ಷಣ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಹೆಚ್. ಹಂಝ ಕಳಾರ, ಸರಕಾರವು ಜನವಸತಿ ಪ್ರದೇಶವಾದ ಸರ್ವೆ ನಂ. 30ರಲ್ಲಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾಗಿರುವುದು ಪರಿಸರ ವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.

ಜನವಸತಿ ಪ್ರದೇಶಕ್ಕೆ ಕುತ್ತು

ಘಟಕ ನಿರ್ಮಾಣಕ್ಕೆ ಉದ್ದೇಶಿಸಿರುವ ಪ್ರದೇಶದ ಸುತ್ತಮುತ್ತ ದಟ್ಟವಾದ ಜನವಸತಿಯಿದೆ. ಹತ್ತಿರದಲ್ಲೇ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಪೆಲತ್ತೋಡಿ ಕುಟುಂಬ ದೈವಸ್ಥಾನ, ನಾಲೂರು ಶಂಕರ ನಾರಾಯಣ ದೇವಸ್ಥಾನ ಹಾಗೂ ಕೆರೆಗಳಿವೆ. ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಎಂಡೋಸಲ್ಫಾನ್ ಪೀಡಿತರು ವಾಸವಾಗಿದ್ದು, ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಘಟಕ ಸ್ಥಾಪನೆಯಾದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

“ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಜನರ ಪ್ರಾಣಕ್ಕೆ ಸಂಚಕಾರ ತರುವ ಯೋಜನೆ ನಮಗೆ ಬೇಡ. ಜನರಿಗೆ ತೊಂದರೆಯಾಗದಂತಹ ಸೂಕ್ತವಾದ ಪರ್ಯಾಯ ಸ್ಥಳದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಲಿ ಎನ್ನುವುದು ನಮ್ಮ ಆಗ್ರಹ,” ಎಂದು ಹಂಝ ಕಳಾರ ಹೇಳಿದರು.

kadaba times
kadaba times

ಅಧಿಕಾರಿಗಳ ಗೊಂದಲಕಾರಿ ಹೇಳಿಕೆ

ಯೋಜನೆಯ ಕುರಿತು ಅಧಿಕಾರಿಗಳಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. “ಆರಂಭದಲ್ಲಿ ಇದು ನೀರಿನ ಘಟಕ ಎಂದು ತಹಸೀಲ್ದಾರ್ ಹೇಳಿದ್ದರು. ಪಟ್ಟಣ ಪಂಚಾಯಿತಿಯವರಿಗೂ ಸರಿಯಾದ ಮಾಹಿತಿ ಇಲ್ಲ. ಉಜಿರೆಯ ಸುರ್ಯದಲ್ಲಿರುವ ಘಟಕವನ್ನು ಮಾದರಿಯಾಗಿ ತೋರಿಸುತ್ತಿದ್ದಾರೆ, ಆದರೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅದು ಸರಿಯಾದ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿರುವುದು ಕಂಡುಬಂದಿದೆ,” ಎಂದು ಅವರು ವಿವರಿಸಿದರು.

ಪ್ರಜಾಸತ್ತಾತ್ಮಕ ಹೋರಾಟ

ಈಗಾಗಲೇ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ಘಟಕದ ನಿರ್ವಹಣೆಯಲ್ಲಿ ವಿಫಲವಾಗಿದೆ. ಇನ್ನು ಮಲತ್ಯಾಜ್ಯ ಘಟಕವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬ ವಿಶ್ವಾಸ ನಮಗಿಲ್ಲ. ಪೊಲೀಸರ ಮೂಲಕ ನಮಗೆ ಕಾಮಗಾರಿ ಸ್ಥಳಕ್ಕೆ ಹೋಗಬಾರದು ಎಂದು ಸೂಚನೆ ನೀಡಲಾಗುತ್ತಿದೆ. ಆದರೆ ನಾವು ನಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡುತ್ತೇವೆ. ಮಂಗಳವಾರ ಪಟ್ಟಣ ಪಂಚಾಯಿತಿ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಪರಿಸರ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಕೆ. ಎಚ್. ಇಸ್ಮಾಯಿಲ್, ರಮ್ಲ ಸನ್‌ರೈಸ್ ಕಳಾರ, ಕೆ. ಎಂ. ಫಾರೂಕ್, ಉಸ್ಮಾನ್ ತಿಮರಡ್ಡ, ಮೊಹಮ್ಮದ್ ಅಲಿ, ಹಾರಿಸ್ ಕಳಾರ, ಸುಕೇಶ್ ಕೆ ಪೆಲತ್ತೋಡಿ, ಜಬ್ಬಾರ್ ಕಳಾರ, ಹಾರಿಸ್ ತಿಮರಡ್ಡ ಮತ್ತಿತರರು ಉಪಸ್ಥಿತರಿದ್ದರು.

Related Articles

Latest Articles