
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳ ಕಾಣಿಕೆ ಡಬ್ಬಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಎಲಿಮಲೆಯಲ್ಲಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಸುಳ್ಯ: ಕಳೆದ ಕೆಲವು ಸಮಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳನ್ನೇ ಗುರಿಯಾಗಿಸಿಕೊಂಡು ಹಗಲು ಹೊತ್ತಿನಲ್ಲಿ ಕಾಣಿಕೆ ಡಬ್ಬಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಎಲಿಮಲೆಯಲ್ಲಿ ಸಾರ್ವಜನಿಕರು ಸಾಹಸಸಿಂಹರಂತೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು (ಏಪ್ರಿಲ್ 6) ನಡೆದಿದೆ.
ದಸ್ತಗಿರಿ ಮಾಡಲಾದ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಮಹಮ್ಮದ್ ಹಾಧಿಬಾಷ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಎಲಿಮಲೆ ಮಸೀದಿಯ ಹೊರಭಾಗದಲ್ಲಿದ್ದ ಹರಿಕೆ ಡಬ್ಬಿಯನ್ನು ಒಡೆಯುವ ಶಬ್ದ ಕೇಳಿಬಂದಿದೆ. ತಕ್ಷಣ ಮಸೀದಿಯ ಗುರುಗಳು ಹೊರಬಂದು ನೋಡಿದಾಗ, ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯನ್ನು ಒಡೆಯುತ್ತಿರುವುದು ಕಂಡುಬಂದಿದೆ. ಗುರುಗಳು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಆತ ಕೈಯಿಂದ ತಪ್ಪಿಸಿಕೊಂಡು ರಸ್ತೆಯ ಕಡೆಗೆ ಓಡಿಹೋಗಿದ್ದಾನೆ.


ಸಿನೆಮಾ ಶೈಲಿಯ ಬೆನ್ನಟ್ಟುವಿಕೆ:
ಮಸೀದಿಯ ಗುರುಗಳು ಕೂಡಲೇ ಎಲಿಮಲೆ ಪೇಟೆಯ ಅಡಿಕೆ ವ್ಯಾಪಾರಿಯಾದ ಹ್ಯಾರಿಸ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಹ್ಯಾರಿಸ್, ತಮ್ಮ ಕಾರಿನಲ್ಲಿ ಕಳ್ಳನನ್ನು ಬೆನ್ನಟ್ಟಿದ್ದಾರೆ. ಮಸೀದಿಯಿಂದ ಸ್ವಲ್ಪ ದೂರದಲ್ಲಿಯೇ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಸ್ಥಳೀಯರು ಜಮಾಯಿಸಿ, ಆರೋಪಿಯನ್ನು ಹ್ಯಾರಿಸ್ ಅವರ ಕಾರಿನಲ್ಲೇ ಮಸೀದಿಗೆ ಕರೆತಂದಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಹಳೇ ಕಳ್ಳ:
ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಗೂನಡ್ಕದ ಬದ್ರಿಯಾ ಮಸೀದಿಯಲ್ಲಿ ಈತ ಕಳ್ಳತನ ನಡೆಸಿ ಪರಾರಿಯಾಗಿದ್ದನು. ಈ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದರು.
