
ಬಜತ್ತೂರು ಗ್ರಾಮದ ಮಣಿಕ್ಕಳದಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ, 5 ಹುಂಜಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.


ಉಪ್ಪಿನಂಗಡಿ: ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕದ ಮೇಲೆ ಉಪ್ಪಿನಂಗಡಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಹಾಗೂ ಐದು ಹುಂಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಯಿಲ ಗ್ರಾಮದ ಸಬಲೂರಿನ ಸತೀಶ್ (38), ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಮುರಳಿ (30) ಹಾಗೂ ವಳಾಲಿನ ಕುಡತ್ತಡ್ಕ ನಿವಾಸಿ ಮೋನಪ್ಪ ಕೆ. (36) ಕೇಳಿ ಅಂಕದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದವರೆಂದು ಗುರುತಿಸಲಾಗಿದೆ.
ಮಾ.3ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮಣಿಕ್ಕಳ ಪರಿಸರದಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಕೋಳಿಗಳು ಕೂಗುವ ಸದ್ದು ಕೇಳಿಬಂದಿದ್ದು, ಅನುಮಾನಗೊಂಡು ಸ್ಥಳಕ್ಕೆ ತೆರಳಿದಾಗ ರಸ್ತೆ ಬದಿಯಲ್ಲಿ ಕೋಳಿ ಅಂಕ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.


ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಅಂಕದಲ್ಲಿ ಸೇರಿದ್ದ ಜನ ಗುಂಪು ಚದುರಿ ಓಡಿ ಹೋಗಿದ್ದಾರೆ. ಈ ವೇಳೆ ಮೂವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸ್ಥಳದಿಂದ ಪೊಲೀಸರು 5 ಹುಂಜಗಳು,ಕೋಳಿ ಕಾಲಿಗೆ ಕಟ್ಟುವ 2 ಬಾಲುಗಳು (ಚೂರಿಗಳು),ಜೂಜಾಟಕ್ಕೆ ಬಳಸಿದ್ದ 2,300 ರೂ. ನಗದು, ಒಂದು ಮೋಟಾರ್ ಸೈಕಲ್ ಮತ್ತು ಎರಡು ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಹೇಳಿಕೆ: ಪೊಲೀಸರ ವಿಚಾರಣೆ ವೇಳೆ, ದೇರಣ್ಣ ಮತ್ತು ಉಮೇಶ್ ಎಂಬುವವರು ಈ ಕೋಳಿ ಅಂಕವನ್ನು ಆಯೋಜಿಸಿದ್ದರು ಎಂದು ಬಂಧಿತರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
