
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ನೆಟ್ಟಣ (ಸುಬ್ರಹ್ಮಣ್ಯ ರೋಡ್) ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಸ್ವಚ್ಛತೆ ಮತ್ತು ಮಹಿಳಾ ವಿಶ್ರಾಂತಿ ಗೃಹದ ದುರುಪಯೋಗದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕಡಬ: ಸಾರ್ವಜನಿಕರ ದೂರು ಹಾಗೂ ರೈಲು ಬಳಕೆದಾರರ ಸಂಘದ ಮನವಿಯ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳವಾರ ಕಡಬ ತಾಲೂಕಿನ ನೆಟ್ಟಣ (ಸುಬ್ರಹ್ಮಣ್ಯ ರೋಡ್) ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ:ನಿಲ್ದಾಣದ ಪರಿಸರ ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಲ್ದಾಣವನ್ನು ಪರಿಶೀಲಿಸಿದ ಶಾಸಕರು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಪ್ರತಿದಿನ ನಿಲ್ದಾಣದ ಪರಿಸರವನ್ನು ಸ್ವಚ್ಛವಾಗಿಡಬೇಕು, ನಿರ್ವಹಣೆಯಲ್ಲಿ ಯಾವುದೇ ಲೋಪವಾಗಬಾರದು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಹಿಳಾ ವಿಶ್ರಾಂತಿ ಗೃಹದಲ್ಲಿ ಪುರುಷರ ವಾಸ್ತವ್ಯ!: ಪರಿಶೀಲನೆಯ ವೇಳೆ ಮಹಿಳೆಯರಿಗಾಗಿ ಮೀಸಲಿಟ್ಟ ವಿಶ್ರಾಂತಿ ಗೃಹದಲ್ಲಿ ಪುರುಷರು ಇರುವುದನ್ನು ಗಮನಿಸಿದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಮಹಿಳೆಯರಿಗೆ,ಪುರುಷರಿಗೆ ಪ್ರತ್ಯೇಕ ಕೊಠಡಿ ಇದ್ದರೂ ಪುರುಷರು ಇಲ್ಲಿ ಹೇಗೆ ಬಂದರು?” ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದರು.


ತಿಂಗಳಿಗೊಮ್ಮೆ ಅಧಿಕಾರಿಗಳ ಭೇಟಿಗೆ ನಿರ್ದೇಶನ :ನಿಲ್ದಾಣದ ಸಮಸ್ಯೆಗಳ ಬಗ್ಗೆ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ನೆಟ್ಟಣ ಅವರಿಂದ ಮಾಹಿತಿ ಪಡೆದ ಶಾಸಕರು, ಕಡಬ ತಹಶೀಲ್ದಾರ್ ಅವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ತಿಂಗಳಿಗೊಮ್ಮೆ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು, ಬಾಕಿ ಇರುವ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಸದರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜುರೆ , ಪಕ್ಷದ ಪ್ರಮುಖರು ಹಾಜರಿದ್ದರು.
