
ಕಡಬ ತಾಲೂಕಿನ ಪೆರಾಬೆ ಗ್ರಾಮದ ನಡ್ಡೋಟ್ಟು ನಿವಾಸಿ ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಕಡಬ: ದೀರ್ಘಕಾಲದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಪೆರಾಬೆ ಗ್ರಾಮದಲ್ಲಿ ನಡೆದಿದೆ.
ಪೆರಾಬೆ ಗ್ರಾಮದ ನಡ್ಡೋಟ್ಟು ಮನೆ ನಿವಾಸಿ ಸಂಜೀವ ಪೂಜಾರಿ ಮೃತಪಟ್ಟ ದುರ್ದೈವಿ. ಇವರು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕಾಯಿಲೆಯ ತೀವ್ರತೆಯಿಂದಾಗಿ ಅವರು ಆಗಾಗ “ನಾನು ಬದುಕುವುದಿಲ್ಲ, ಸಾಯುತ್ತೇನೆ” ಎಂದು ಮನೆಯವರ ಬಳಿ ಹೇಳಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.
ಮಾರ್ಚ್ 13ರಂದು ಸಂಜೀವ ಪೂಜಾರಿಯವರ ಪತ್ನಿ ಪುಷ್ಪವತಿ ಅವರು ಪಡಿತರ ತರಲು ಸುರಳಿಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ವಾಪಸ್ ಬಂದಾಗ, ಸಂಜೀವ ಪೂಜಾರಿಯವರು ವಾಂತಿ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣ ವಿಚಾರಿಸಿದಾಗ ಅವರು ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದಾರೆ.


ತಕ್ಷಣವೇ ಅವರ ಪುತ್ರ ಯೋಗೀಶ್ ಅವರಿಗೆ ಮಾಹಿತಿ ನೀಡಿ, ರಿಕ್ಷಾ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 14ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮೃತರ ಹಿರಿಯ ಮಗ ಗಣೇಶ್ ಪ್ರಸಾದ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ UDR ನಂಬ್ರ 09/2026, ಕಲಂ: 194 BNSS-2023 ರಂತೆ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಆಪ್ತರಿಗೆ ಮಾನಸಿಕ ನೆರವಿನ ಅಗತ್ಯವಿದ್ದರೆ ತಕ್ಷಣ ಸಹಾಯವಾಣಿಗಳನ್ನು ಸಂಪರ್ಕಿಸಿ.
