
ಉಪ್ಪಿನಂಗಡಿ: ಇಲ್ಲಿನ ಕಲ್ಲೇರಿ ಎಂಬಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದುವರೆ ವರ್ಷದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮಗುವಿನ ತಾಯಿ ಮತ್ತು ಅಜ್ಜ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ತಣ್ಣೀರುಪಂತ ಗ್ರಾಮದ ಕೊಡಂಗೆ ನಿವಾಸಿ ಇಸ್ಮಾಯಿಲ್ (60) ಅವರು ಸೋಮವಾರ ತನ್ನ ಮಗಳು ಸಾಜಿರಾ (33) ಹಾಗೂ ಮೊಮ್ಮಗಳು ಸುಹೈರಾ (5.5 ವರ್ಷ) ರನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಪ್ರಯಾಣಿಸುತ್ತಿದ್ದರು.
ಈ ವೇಳೆ ಎದುರುಗಡೆಯಿಂದ ವೇಣೂರು ಮೂಲದ ಶಿವಪ್ರಸಾದ್ ಎಂಬವರು ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತಲೆಗೆ ತೀವ್ರವಾಗಿ ಏಟು ಬಿದ್ದಿದ್ದ ಸುಹೈರಾ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ.


ಇನ್ನುಳಿದಂತೆ ಇಸ್ಮಾಯಿಲ್ ಮತ್ತು ಸಾಜಿರಾ ಅವರು ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
