
ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬ ತಾಲೂಕಿನಾದ್ಯಂತ ಮಾರ್ಚ್ 15ರಂದು ಗುಡುಗು ಸಹಿತ ಭಾರೀ ಮಳೆಯಾಗಿದೆ. ಮರ ಉರುಳಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಕೃಷಿ ಹಾನಿಯಾದ ವರದಿಯಾಗಿದೆ


ಕಡಬ /ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕಡಬ ತಾಲೂಕಿನ ಹಲವೆಡೆಗಳಲ್ಲಿ ಭಾನುವಾರ (ಮಾರ್ಚ್ 15) ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ. ಬಿರು ಬೇಸಿಗೆಯ ನಡುವೆ ದಿಢೀರ್ ಸುರಿದ ಈ ಮಳೆ ಜನರಲ್ಲಿ ಆಶ್ಚರ್ಯ ಮೂಡಿಸಿದರೆ, ಗಾಳಿಯ ರಭಸಕ್ಕೆ ಮರಗಳು ಉರುಳಿ ಹಾನಿ ಸಂಭವಿಸಿದೆ.
ಕುಕ್ಕೆ ಸುಬ್ರಹ್ಮಣ್ಯದ ಸವಾರಿ ಮಂಟಪದಿಂದ ದೇವರ ಗದ್ದೆ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಗಾಳಿಯ ಹೊಡೆತಕ್ಕೆ ಸಿಲುಕಿ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿದೆ. ಸಾಮಾನ್ಯವಾಗಿ ಈ ರಸ್ತೆಯ ಎರಡು ಬದಿಗಳಲ್ಲಿ ಭಕ್ತರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಆದರೆ, ಇಂದು ಏಕಾದಶಿ ಆಗಿದ್ದರಿಂದ ಭಕ್ತರ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇತ್ತು. ಇದರಿಂದಾಗಿ ಮರ ಬಿದ್ದ ಜಾಗದಲ್ಲಿ ವಾಹನಗಳಿಲ್ಲದ ಕಾರಣ ದೊಡ್ಡ ಮಟ್ಟದ ಹಾನಿ ತಪ್ಪಿದಂತಾಗಿದೆ.


ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಉರುಳಿದ ಪರಿಣಾಮ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಡಬ ತಾಲೂಕಿನಾದ್ಯಂತ ಸುರಿದ ಈ ಅಕಾಲಿಕ ಮಳೆಯಿಂದಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ಅಡಿಕೆ, ಬಾಳೆ ಸೇರಿದಂತೆ ವಿವಿಧ ಕೃಷಿ ತೋಟಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಬಿರುಸಿನ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
