Ramakunja: ಗುಂಡೇಟಿನಿಂದ ಬಾಲಕನ ಸಾವು ಪ್ರಕರಣಕ್ಕೆ ಹೊಸ ತಿರುವು: ವೈದ್ಯಕೀಯ ವರದಿಯಲ್ಲಿ ಶಾಕಿಂಗ್ ಮಾಹಿತಿ

kadaba times

ಕಡಬದ ರಾಮಕುಂಜ ಗ್ರಾಮದ ಪಾದೆಯಲ್ಲಿ ನಡೆದ ಮಗನ ಸಾವು ಹಾಗೂ ತಂದೆಯ ಗಾಯದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ತಂದೆ ವಸಂತ ಅಮೀನ್ ಚಾಕು ಇರಿತದಿಂದಲ್ಲ, ಬಂದೂಕಿನ ಗುಂಡಿನಿಂದ ಗಾಯಗೊಂಡಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

kadaba times
uniq

ಕಡಬ: ಸುಮಾರು 20 ದಿನಗಳ ಹಿಂದೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ನಡೆದಿದ್ದ ತಂದೆ-ಮಗನ ನಡುವಿನ ಘರ್ಷಣೆ ಹಾಗೂ ಮಗನ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಘಟನೆಯಲ್ಲಿ ಗಾಯಗೊಂಡಿದ್ದ ತಂದೆ ವಸಂತ ಅಮೀನ್ ಅವರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಅವರು ಗಾಯಗೊಂಡಿರುವುದು ಬಂದೂಕಿನ ಗುಂಡಿನಿಂದ ಎಂದು ವೈದ್ಯರು ಇದೀಗ ದೃಢೀಕರಿಸಿದ್ದಾರೆ.

ಘಟನೆಯ ಹಿನ್ನೆಲೆ: ಜನವರಿ 24ರಂದು ಸಂಜೆ ರಾಮಕುಂಜದ ಪಾದೆ ನಿವಾಸಿ ವಸಂತ ಅಮೀನ್ ಮತ್ತು ಜಯಶ್ರೀ ದಂಪತಿಯ ಪುತ್ರ ಮೋಕ್ಷ್ (17 ವರ್ಷ) ಮನೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಅದೇ ಸಮಯದಲ್ಲಿ ತಂದೆ ವಸಂತ ಅಮೀನ್ ಹೊಟ್ಟೆಯ ಭಾಗದಲ್ಲಿ ತೀವ್ರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯ ವೇಳೆ ಮನೆಯಲ್ಲಿ ತಂದೆ-ಮಗ ಇಬ್ಬರೇ ಇದ್ದರು ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ವರದಿ ಏನಿತ್ತು?: ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪರಿಚಯಸ್ಥ ಪದ್ಮನಾಭ ಶೆಟ್ಟಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಾಳು ವಸಂತ ಅಮೀನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಮಗ ನನಗೆ ಚೂರಿಯಿಂದ ಇರಿದು, ನಂತರ ತನ್ನ ತಂದೆಯ ಹೆಸರಿನಲ್ಲಿದ್ದ ಪರವಾನಗಿ ಹೊಂದಿರುವ ಬಂದೂಕಿನಿಂದ ಮುಖಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ವಸಂತ ಅಮೀನ್ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಅದರಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

kadaba times
kadaba times

ವೈದ್ಯಕೀಯ ವರದಿಯಿಂದ ಬಯಲಾದ ಸತ್ಯ: ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರಿಗೆ ವೈದ್ಯಕೀಯ ವರದಿಯಲ್ಲಿ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ವಸಂತ ಅಮೀನ್ ಅವರ ಹೊಟ್ಟೆಗೆ ಚಾಕು ಇರಿತವಾಗಿಲ್ಲ, ಬದಲಾಗಿ ಬಂದೂಕಿನ ಗುಂಡಿನಿಂದಲೇ ಗಾಯವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ವಸಂತ ಅಮೀನ್ ನೀಡಿದ್ದ ಆರಂಭಿಕ ಹೇಳಿಕೆಯ ಮೇಲೆ ಸಂಶಯ ಮೂಡುವಂತಾಗಿದೆ.

ಪೊಲೀಸ್ ಇಲಾಖೆಯ ಸ್ಪಷ್ಟನೆ: ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸ್ ಇಲಾಖೆ, “ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2026 ಕಲಂ: 109 ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಾಗಿದೆ. ಗಾಯಾಳು ತಂದೆಯವರಿಗೆ ಆದ ಗಾಯವು ಬಂದೂಕಿನ ಗುಂಡಿನಿಂದ ಆಗಿರುವುದು ಎಂದು ವೈದ್ಯರು ದೃಢೀಕರಿಸಿದ್ದಾರೆ. ಬೆಂಗಳೂರಿನ ಎಫ್‌ಎಸ್‌ಎಲ್ (FSL) ವರದಿ ಬರಲು ಬಾಕಿ ಇದ್ದು, ವರದಿ ಬಂದ ನಂತರ ಈ ನಿಗೂಢ ಪ್ರಕರಣಕ್ಕೆ ಅಂತಿಮ ತೀರ್ಮಾನ ಸಿಗಲಿದೆ” ಎಂದು ತಿಳಿಸಿದೆ.

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಮಗ ತಂದೆಗೆ ಗುಂಡು ಹಾರಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಘಟನೆಯ ಹಿಂದೆ ಬೇರೆ ಏನಾದರೂ ನಡೆದಿದೆಯೇ ಎಂಬುದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಬೇಕಿದೆ.

Related Articles

Latest Articles