
ನೆಲ್ಯಾಡಿಯ ಕೆ.ಸಿ ವರ್ಗೀಸ್ ಸಾವಿನ ಪ್ರಕರಣ ಈಗ ಕೊಲೆ ಕೇಸ್ ಆಗಿ ಮಾರ್ಪಟ್ಟಿದೆ. ತಂದೆ ಮಂಚದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದ ಮಗ ಹಾಗೂ ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿದೆ ಪೂರ್ಣ ವಿವರ.


ನೆಲ್ಯಾಡಿ : ಇತ್ತೀಚೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿಯಲ್ಲಿ ಸಂಭವಿಸಿದ್ದ ಕೆ.ಸಿ ವರ್ಗೀಸ್ (73) ಎಂಬವರ ಅಸ್ವಾಭಾವಿಕ ಸಾವು ಪ್ರಕರಣವು ಈಗ ರೋಚಕ ತಿರುವು ಪಡೆದುಕೊಂಡಿದೆ. ವೈದ್ಯಕೀಯ ವರದಿ ಮತ್ತು ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಇದು ಕೇವಲ ಸಾವಲ್ಲ, ಬದಲಾಗಿ ಸುಪಾರಿ ಮಾದರಿಯ ಕೊಲೆ ಎಂಬುದು ಸಾಬೀತಾಗಿದ್ದು, ಈ ಸಂಬಂಧ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ಫೆಬ್ರವರಿ 9, 2026 ರಂದು ಕೆ.ಸಿ ವರ್ಗೀಸ್ ಮೃತಪಟ್ಟಿದ್ದರು. ಆ ಸಮಯದಲ್ಲಿ ಅವರ ಮಗ ಕೆ.ವಿ. ತೋಮಸ್, ತನ್ನ ತಂದೆ ಮಂಚದಿಂದ ಕೆಳಗೆ ಬಿದ್ದಾಗ ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR 07/2026) ಎಂದು ಪ್ರಕರಣ ದಾಖಲಾಗಿತ್ತು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ: ಮೃತರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ತಲೆಗೆ ಉಂಟಾದ ಗಂಭೀರ ಹಲ್ಲೆ ಮತ್ತು ದೇಹದ ಇತರ ಭಾಗಗಳ ಗಾಯಗಳಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿತ್ತು. ಇದರಿಂದ ಸಂಶಯಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ.


ಕೊಲೆಗೆ ಕಾರಣವೇನು? ಮೃತ ಕೆ.ಸಿ ವರ್ಗೀಸ್ ಅವರು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಮಗ ಸೇರಿ ವರ್ಗೀಸ್ ಅವರಿಗೆ ಪಾಠ ಕಲಿಸಲು ಸಂಚು ರೂಪಿಸಿದ್ದರು.ಪತ್ನಿಯ ಮೇಲೆ ವರ್ಗೀಸ್ ಹಲ್ಲೆ ನಡೆಸಿದ್ದನ್ನು ಕಂಡ ಆಕೆಯ ತಮ್ಮ ರಾಜು, ಕೂಡಲೇ ಮತ್ತೊಬ್ಬ ತಮ್ಮ ಚಾಕೊಚ್ಚನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದನು. ಮಗ ಕೆ.ವಿ ತೋಮಸ್ ಜೊತೆಗೂಡಿ ವರ್ಗೀಸ್ ಅವರಿಗೆ ಹೆದರಿಸಬೇಕೆಂದು ಚರ್ಚೆ ನಡೆಸಿದ್ದರು. ಸಂಚಿನಂತೆ ತೋಮಸ್ನನ್ನು ಸ್ವಲ್ಪ ದೂರ ನಿಲ್ಲಿಸಿ, ರಾಜು ಮತ್ತು ಚಾಕೊಚ್ಚ ಮನೆಗೆ ನುಗ್ಗಿ ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಮನಬಂದಂತೆ ಥಳಿಸಿದ್ದರು. ಹಲ್ಲೆಯ ನಂತರ ತೋಮಸ್ ಬಳಿ ಬಂದು, “ನಾವು ಸರಿಯಾಗಿ ಹೊಡೆದಿದ್ದೇವೆ, ಇನ್ನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಹೇಳಿ ಪರಾರಿಯಾಗಿದ್ದರು.
ಆಸ್ಪತ್ರೆಯಲ್ಲಿ ಸುಳ್ಳು ಹೇಳಿದ್ದ ಮಗ: ಹಲ್ಲೆಗೊಳಗಾದ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಮಗ ತೋಮಸ್, ಅಲ್ಲಿ ತಂದೆ ಮಂಚದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಸುಳ್ಳು ಕಥೆ ಹೇಳಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದನು.
ಬಂಧಿತ ಆರೋಪಿಗಳು: ಪೊಲೀಸರು ತನಿಖೆಯ ಆಧಾರದ ಮೇಲೆ ಕೆ.ವಿ. ತೋಮಸ್ @ ವಿಲ್ಸನ್ (39), ಸಿ.ಟಿ ರಾಜು @ ವರ್ಗೀಸ್ (59) ಮತ್ತು ಚಾಕೊಚ್ಚ (51) ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣವನ್ನು ಈಗ ಕಲಂ 103 (1) BNS-2023 ರಂತೆ ಕೊಲೆ ಪ್ರಕರಣವಾಗಿ ಮಾರ್ಪಡಿಸಿ ತನಿಖೆ ಮುಂದುವರಿಸಲಾಗಿದೆ.
