
ಕಡಬ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ.1 ರಂದು ಆಡಳಿತ ಸೌಧದ ಮುಂಭಾಗ ನಡೆಯಿತು. ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ ಕನ್ನಡ-ನಾಡು-ನುಡಿ ಸಂಸ್ಕೃತಿಯ ಗುಣಗಾನ ಮಾಡಿ ಶುಭಹಾರೈಸಿದರು. ಉಪತಹಶೀಲ್ದಾರ್ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು .


ಕಡಬ ಪೊಲೀಸ್ ಠಾಣಾಧಿಕಾರಿ ಅಭಿನಂದನ್ ನೇತೃತ್ವದ ಪೊಲೀಸರಿಂದ ಧ್ವಜವಂದನೆ ನಡೆಯಿತು. ಧ್ವಜಾರೋಹಣದ ನಂತರ ಸ್ಕೌಟ್, ಗೈಡ್ ಮಕ್ಕಳು, ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಬ್ಯಾಂಡ್ ತಂಡಗಳೊಂದಿಗೆ ಕಡಬ ಮುಖ್ಯ ಪೇಟೆಯಲ್ಲಿ ಭವ್ಯ ಮೆರವಣಿಗೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ ಅವರು ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಭಾಷಣಕಾರರಾದ ಜನಾರ್ದನ ಗೌಡ ಪಣೆಮಜಲ್ ಅವರು ಕನ್ನಡದ ಐತಿಹಾಸಿಕ ಮಹತ್ವ, ಸಂಸ್ಕೃತಿ ಮತ್ತು ಅದರ ಉಳಿವಿನ ಅಗತ್ಯತೆಯ ಕುರಿತು ಮಾತನಾಡಿದರು.


ಇದೇ ವೇಳೆ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ತ್ರಿಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಶಾಲು ಹೊದಿಸಿ ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಜಿ ಕೆ.ಎಂ. ಹನೀಫ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಇಂಜಾಡಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಕಾಂಗ್ರೆಸ್ ಮುಖಂಡ ಪಿ.ಪಿ. ವರ್ಗೀಸ್, ಜೆಡಿಎಸ್ ಮುಖಂಡ ಮೀರಾ ಸಾಹೇಬ್, ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ, ಹಾಗೂ ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಉತ್ಸಾಹಭರಿತರಾಗಿ ಭಾಗವಹಿಸಿದರು.. ಸಭಾ ಕಾರ್ಯಕ್ರಮದ ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗಣೇಶ್ ನಡುವಾಲ್ ಅವರು ಕಾರ್ಯಕ್ರಮ ನಿರೂಪಿಸಿ, ಕಂದಾಯ ಇಲಾಖೆಯ ಸಿಬ್ಬಂದಿ ಉದಯಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
