
ಕಡಬ: ಇಲ್ಲಿನ ಸಂತೆಕಟ್ಟೆ ಬಳಿ ಇರುವ ಹಸಿಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ಕಡಿಮೆ ದರ ಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದ ಘಟನೆ ನ.1 ರಂದು ನಡೆದಿರುವುದಾಗಿ ತಿಳಿದು ಬಂದಿದೆ.


ಈ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳು ಹೊಡೆದಾಟ ಮಾಡಿಕೊಳ್ಳುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಏಲಂ ಮೂಲಕ ಹಸಿಮೀನು ಮಾರುಕಟ್ಟೆಯ ಸ್ಟಾಲನ್ನು ಪಡೆದುಕೊಂಡಿದ್ದ ವ್ಯಾಪಾರಿಯೊಬ್ಬರು ನ. 2 ರ ವರೆಗೆ ” ಎರಡು ಕೆಜಿ ಬಂಗುಡೆಗೆ ಒಂದು ಕೆ.ಜಿ ಬೂತಾಯಿ ಮೀನು” ನೀಡುವ ಬಗ್ಗೆ ಪ್ರಚಾರ ಮಾಡಿದ್ದರು. ಹೀಗಾಗಿ ಮೀನು ಖರೀದಿಗೆ ಜನ ಹೆಚ್ಚು ಆಗಮಿಸಿದ್ದರು. ಇದರಿಂದ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಸ್ಟಾಲ್ ನ ಹಿರಿಯ ವ್ಯಾಪಾರಿಯೊಬ್ಬರು ಗ್ರಾಹಕರನ್ನು ಜೋರು ಧ್ವನಿಯಲ್ಲಿ ಕರೆಯದೆ ವ್ಯಾಪಾರ ಮಾಡುವಂತೆ ವಿನಂತಿಸಿಕೊಂಡಿದ್ದರು ಎನ್ನಲಾಗಿದೆ.


ನಂತರದ ಬೆಳವಣಿಗೆಯಲ್ಲಿ ಗ್ರಾಹಕರನ್ನು ತಮ್ಮತ್ತ ಕರೆಯುವ ವಿಚಾರದಲ್ಲಿ ಇತ್ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಕೆಲವರು ಇತ್ತಂಡಗಳ ಹೊಡೆದಾಟವನ್ನು ಬಿಡಿಸಲು ಮುಂದಾಗಿದ್ದಾರೆ. ಸದ್ಯ ಹೊಡೆದಾಟದ ವೀಡಿಯೋ ತುಣುಕು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪೊಲೀಸರ ಪರಿಶೀಲನೆಯ ಬಳಿಕ ವಾಸ್ತವ ವಿಚಾರ ತಿಳಿದು ಬರಳಿದೆ.
