
- ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ಸಮರ!
- ಬಸ್ಸು ನಿಲ್ದಾಣದಕ್ಕೆ ಜಾಗ ಮೀಸಲಿಡುವ ಬಗ್ಗೆ ಚರ್ಚೆ
- ಪೇಟೆಯಲ್ಲಿ ವಾಹನ ನಿಲುಗಡೆ ಜಾಗದ ಬಗ್ಗೆ ಚರ್ಚೆ:ಅಭಿವೃದ್ದಿಪಡಿಸಿ ಪೇ ಪಾರ್ಕಿಂಗ್ ಮಾಡುವ ಬಗ್ಗೆ ನಿರ್ಣಯ
- ಇಂದಿರಾ ಕ್ಯಾಂಟಿನ್ ತೆರೆಯುವ ಬಗ್ಗೆ ಚರ್ಚೆ , ಕುಡಿಯುವ ನೀರಿಗಾಗಿ ಪರದಾಟ!
ಕಡಬ: ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲಿ ಪ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯತ್ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಭಾರೀ ಮಾತಿನ ಭರಾಟೆ ನಡೆಯಿತು.


ಒಂದು ವರ್ಷದ ಅವಧಿಗೆ ಹನೀಫ್ ಕೆ ಎಂ, ಸೈಮನ್ ಸಿ ಜೆ, ಕೃಷ್ಣಪ್ಪ ಪೂಜಾರಿ, ರೋಹಿತ್ ಪಿ ಜೆ, ಪೈಝಲ್ , ಮೋಹನ್ ನಾಯ್ಕ, ಕೃಷ್ಣಪ್ಪ ನಾಯ್ಕ ಒಟ್ಟು 7 ಸದಸ್ಯರಿರುವ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪಟ್ಟಿಯಲ್ಲಿ 6 ಕಾಂಗ್ರೆಸ್ ಸದಸ್ಯರು ಹಾಗೂ ಓರ್ವ ಬಿಜೆಪಿ ಸದಸ್ಯ ಮೋಹನ ನಾಯ್ಕ ಹೆಸರು ಉಲ್ಲೇಖವಾಯಿತು.
ಈ ಸಮಯದಲ್ಲಿ ಬಿಜೆಪಿ ಸದಸ್ಯರಾದ ಕುಸುಮಾ, ಗುಣವತಿ, ಅಕ್ಷತಾ, ದಯಾನಂದ , ಮೋಹನ ನಾಯ್ಕ ಅಕ್ಷೇಪ ವ್ಯಕ್ತಪಡಿಸಿ ಇಬ್ಬರು ಬಿಜೆಪಿ ಸದಸ್ಯರಿಗೆ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ನಿಂದ ಐವರು ಸದಸ್ಯರು ಮಾತ್ರ ಇರಲಿ, ಬಿಜೆಪಿಯಿಂದ ಇಬ್ಬರು ಸದಸ್ಯರಿಗೆ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ಬಗ್ಗೆ ಎರಡು ಪಕ್ಷದ ಸದಸ್ಯರ ನಡುವೆ ಮಾತಿನ ಭರಾಟೆ ನಡೆದರೂ ಪಟ್ಟು ಬಿಡದ ಆಡಳಿತ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಹೇಳಿದ ಪಟ್ಟಿಯನ್ನೇ ಅಂತಿಮಗೊಳಿಸಿತ್ತು.
ಬಸ್ಸು ನಿಲ್ದಾಣದಕ್ಕೆ ಜಾಗ ಮೀಸಲಿಡುವ ಬಗ್ಗೆ ಚರ್ಚೆ: ಸಭೆಯ ಕಾರ್ಯ ಸೂಚಿಯಂತೆ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಕ್ಕೆ ಜಾಗ ಮೀಸಲಿಡುವ ಬಗ್ಗೆ ವಿಷಯ ಪ್ರಸ್ತಾಪಗೊಂಡಿತು. ಚರ್ಚೆ ನಡೆದು ಈಗಾಗಲೇ ಹಳೆಸ್ಟೇಷನ್ ಬಳಿಯ ಕೆರೆ ಪ್ರದೇಶ ಗುರುತಿಸಿದರೂ ಆ ಜಾಗವನ್ನು ಮೀಸಲಿಡಲು ಕಾನೂನಿನಲ್ಲಿ ಅವಕಾಶವಿಲ್ಲ, ಅಂಬೇಡ್ಕರ ಭವನದ ಪಕ್ಕದ ಜಾಗ ಗುರುತು ಮಾಡಿದರೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ವಿಸ್ತೀರ್ಣ ಸಾಕಾಗುತ್ತಿಲ್ಲ ಅಲ್ಲದೆ ಸಂಪರ್ಕ ರಸ್ತೆಯು ಕಿರಿದಾಗಿದೆ ಎನ್ನುತ್ತಾರೆ. ಸೂಕ್ತ ಜಾಗ ಹುಡುಕುವ ಬಗ್ಗೆ ಸದಸ್ಯರೊಳಗೆ ಚರ್ಚೆ ನಡೆಯಿತು. ಭವಿಷ್ಯದ ದೃಷ್ಟಿಯಿಂದ ಹೆಚ್ಚು ವಿಸ್ತಿರ್ಣದ ಜಾಗ ಗುರುತಿಸಿ ಸುಸಜ್ಜಿತ ಬಸ್ಸು ನಿಲ್ದಾಣ ಮಾಡಲು ಸೂಕ್ತ ಜಾಗ ಗುರುತಿಸಿವಿಕೆ ನಡೆಯಬೇಕು . ಅಲ್ಲದೆ ಇನ್ನಿತರ ಉದ್ದೇಶಕ್ಕಾಗಿ ಜಾಗ ಮೀಸಲಿಡಲು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನಿನ ಬಗ್ಗೆ ತಕ್ಷಣ ಮಾಹಿತಿ ಒದಗಿಸುವಂತೆ ಕಡಬ ಕಂದಾಯ ಇಲಾಖೆಗೆ ಬರೆದುಕೊಳ್ಳುವಂತೆ ನಿರ್ಣಯಿಸಲಾಯಿತು. ಮುಂದಿನ ಸಾಮನ್ಯ ಸಭೆಯಲ್ಲಿ ಸರ್ಕಾರಿ ಜಾಗದ ಮಾಹಿತಿ ಸಿಗುವಂತಾಗಬೇಕೆಂದು ಸದಸ್ಯರು ಆಗ್ರಹಿಸಿದರು.
ಪೇಟೆಯಲ್ಲಿ ವಾಹನ ನಿಲುಗಡೆ ಜಾಗದ ಬಗ್ಗೆ ಚರ್ಚೆ: ಪೇಟೆಯಲ್ಲಿ ವಾಹನ ನಿಲುಗಡೆ ಮಾಡಲು ಸೂಕ್ತ ಜಾಗ ವ್ಯವಸ್ಥೆಯಿಲ್ಲ ಎಂದು ಚರ್ಚೆ ನಡೆದಾಗ ಸದಸ್ಯ ಕೆ.ಎಂ ಹನೀಫ್ ಮಾತನಾಡಿ, ಈ ಹಿಂದೆ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಪೇಟೆಯ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಬಳಿಯಿಂದ ಸಂತೆ ಕಟ್ಟೆಯವರೆಗೆ ವಾಹನ ನಿಲುಗಡೆಗೆ ಜಾಗ ಗುರುತಿಸಿ ಮಣ್ಣು ಸಮತಟ್ಟು ಮಾಡಲಾಗಿತ್ತು. ಪಂಚಾಯಿತಿ ಆಡಳಿತ ಕೊನೆಗೊಂಡ ಬಳಿಕ ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜಗೇರಿದ ಬಳಿಕ ಯೋಜನೆ ನೆನೆಗುದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಮತ್ತೆ ಈ ಜಾಗವನ್ನು ಅಭಿವೃದ್ದಿಪಡಿಸಿ ಪೇ ಪಾರ್ಕಿಂಗ್ ಮಾಡುವ ಬಗ್ಗೆ ನಿರ್ಣಯಿಸಲಾಯಿತು.


ಇಂದಿರಾ ಕ್ಯಾಂಟಿನ್ ತೆರೆಯುವ ಬಗ್ಗೆ: ಈಗಾಗಲೇ ಇಂದಿರಾ ಕ್ಯಾಂಟಿನ್ ತೆರೆಯಲು ಕಡಬ ಎಪಿಎಂಸಿ ಪ್ರಾಂಗಣ ಬಳಿ ಸುಮಾರು 5 ಸೆಂಟ್ಸ್ ಜಾಗ ಮೀಸಲಿಡಾಗಿದ್ದರೂ ಈ ವಿಸ್ತೀರ್ಣ ಸಾಕಾಗುತ್ತಿಲ್ಲ ಬೇರೆಡೆ ಪೇಟೆ ಭಾಗದಲ್ಲಿ ಸರ್ಕಾರಿ ಜಾಗ ಗುರುತಿಸಲು ನಿರ್ಣಯ ಕೈಗೊಳ್ಳಲಾಯಿತು. ಈಗಾಗಲೇ ಮಿಸಲಿಟ್ಟ ಜಾಗದಲ್ಲಿ ಗ್ರಂಥಲಾಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಯಿತು.
ಕುಡಿಯುವ ನೀರಿಗಾಗಿ ಪರದಾಟ: ಮುಳಿಮಜಲು ಎಂಬಲ್ಲಿ ಕುಡಿಯುವ ನೀರಿನ ಮೋಟರ್ ಆಗಾಗ ಕೆಟ್ಟು ಹೋಗಿ ಕುಡಿಯುವ ನೀರಿಗೆ ಜನರು ಪರದಾಡುತ್ತಾರೆ ಶಾಶ್ವತ ಪರಿಹಾರ ನೀಡಬೇಕು ಎಂದು ಸದಸ್ಯೆ ಕುಸುಮಾ ಆಗ್ರಹಿಸಿದರು. ಮೋಟರ್ ಬದಲಾವಣೆ ಮಾಡಿ ಹಾಕಲಾಗುವುದು ಎಂದು ಇಂಜಿನಿಯಾರ್ ಶಿವಕುಮಾರ್ ಎಂ ಆರ್ ತಿಳಿಸಿದರು. ಕುಡಿಯುವ ನೀರಿನ ಬಿಲ್ಲು ಬಾಕಿ ಇದ್ದಲ್ಲಿ ಫಲಾನುಭವಿಗಳಿಗೆ ಬಿಲ್ಲು ಪಾವತಿಸಲು ಆಯಾ ವಾರ್ಡಿನ ಸದಸ್ಯರು ಮನವರಿಕೆ ಮಾಡಬೇಕು ಎಂದು ಚರ್ಚೆ ನಡೆಯಿತು.
ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ಸೇರಿದಂತೆ ಎಲ್ಲಾ ಸದಸ್ಯರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಪ.ಪಂ ಮುಖ್ಯಾಧಿಕಾರಿ ಲೀಲಾವತಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ಚೇತಾಕಿರಣ್, ಬಿಲ್ಲು ಕಲೆಕ್ಟರ್ ವಾರಿಜ ರೈ , ದ್ವಿ.ದರ್ಜೆ ಸಹಾಯಕ ಹರೀಶ್ ಬೆದ್ರಾಜೆ ಉಪಸ್ಥಿತರಿದ್ದರು.
