
ಕಡಬ ಟೈಮ್ಸ್, ಪ್ರಮುಖ ಸುದ್ದಿ: ಮಲ್ಪೆಯ ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27 ವ), ಕರಂಬಳ್ಳಿ ನಿವಾಸಿ ಮೊಹಮ್ಮದ್ ಶರೀಫ್ (37 ವ) ಮತ್ತು ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕುರ್ (43 ವ) ಎಂಬವರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ಶನಿವಾರ (ಸೆ.27) ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಲ್ಲಿ ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಹತ್ಯೆ ಮಾಡಲಾಗಿತ್ತು. ಸಾಲ್ಮರದ ಸೈಫುದ್ದೀನ್ ನಿವಾಸದಲ್ಲಿ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿತ್ತು.


ತಲೆ ಹಾಗೂ ಬೆನ್ನಿಗೆ ಮಚ್ಚಿನಿಂದ ಬಲವಾಗಿ ಹೊಡೆದಿದ್ದರಿಂದ ಕೊಲೆಗೈದ ಕೆಲವೇ ನಿಮಿಷಗಳಲ್ಲಿ ಜೀವ ಹೋಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರಿಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂಪೂರ್ಣ ರಕ್ತದ ಮಡುವಿನಲ್ಲಿ ಮೃತದೇಹ ಇರುವುದು ಕಂಡುಬಂದಿತ್ತು.
ಬಸ್ ಮಾಲಕ ಸೈಫ್ ಮಣಿಪಾಲದಲ್ಲಿ ಕುಟುಂಬದ ಜತೆ ವಾಸವಾಗಿದ್ದ. ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಫ್ ಹಾಗೂ ಸೈಫ್ ಸ್ನೇಹಿತರಾಗಿದ್ದರು. ಸೈಫ್ನ ಮನೆಗೆ ಶನಿವಾರ ಬೆಳಗ್ಗೆ ಆಗಮಿಸಿದ್ದ ಫೈಜಲ್ ಖಾನ್, ಬಸ್ನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಮನೆಯ ಬಳಿಯಿಂದ ಅವನ ಕಾರಿನಲ್ಲಿ ಹೋಗಿದ್ದರು. ಸೈಫ್ನ ಸ್ನೇಹಿತನಾದ ಫೈಜಲ್ ಖಾನ್ ಮತ್ತು ಶರೀಫ್ ಇತರರೊಂದಿಗೆ ಸೇರಿಕೊಂಡು ಯಾವುದೋ ಕಾರಣದಿಂದ ದ್ವೇಷಗೊಂಡು ಕೊಲ್ಲುವ ಉದ್ದೇಶದಿಂದ ಮಲ್ಪೆಗೆ ಕರೆದುಕೊಂಡು ಹೋಗಿ ಕೊಲೆಗೈದು ಪರಾರಿಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೈಫುದ್ದೀನ್ ಅವರ ಮಗ ದೂರು ನೀಡಿದ್ದ.
