ಕಡಬ ಟೈಮ್ಸ್ (KADABA TIMES): ವರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಬೆದರಿಕೆ ಒಡ್ಡಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಪಿ. ವಿರುದ್ಧ ಬೆಂಗಳೂರು ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸು ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.


ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಚೇರಿ ಹೊಂದಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎ.2ರಂದು ರವಿ ಬಿ.ಎಸ್.ಅವರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್‌ಐ ಕಿಶೋರ್ ಮತ್ತಿತರರ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಿಕೊಂಡ ಬಳಿಕ ರವಿ ಬಿ.ಎಸ್.ಅವರು ತನಿಖೆ ಆರಂಭಿಸಲಿದ್ದಾರೆ.




ಬೆಂಗಳೂರು ನಗರದ ನಾಗರಬಾವಿ ಸರ್ಕಲ್‌ನ ಟೀಚರ್ಸ್ ಕಾಲೋನಿಯ ಮಾನಸ ನಗರದ ೨ನೇ ಅಡ್ಡ ರಸ್ತೆಯ ನಿವಾಸಿಯಾಗಿರುವ ೨೭ ವರ್ಷದ ಯುವತಿ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್, ಯುವತಿಯ ಮಾವ ಪುಟ್ಟ ಚನ್ನಪ್ಪ, ಅತ್ತೆ ಸರಸ್ವತಮ್ಮ ಹಾಗೂ ಮೈದುನ ಚಂದನ್ ಪಿ. ವಿರುದ್ಧ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ೧೯೬೧ ಮತ್ತು ಭಾರತೀಯ ನ್ಯಾಯ ಸಂಹಿತೆ ೨೦೦೩ರ ಸೆಕ್ಷನ್ ೧೦೯, ೧೧೫(೨), ೧೧೮(೧), ೩(೫), ೩೫೧(೩), ೩೫೨ ಮತ್ತು ೮೫ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಕೇಸು ದಾಖಲಾದ ಬಳಿಕ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳಿರುವ ಎಸ್.ಐ. ಕಿಶೋರ್ ಬಳಿಕ ನಾಪತ್ತೆಯಾಗಿದ್ದಾರೆ.


ತನ್ನ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿ ಬೆದರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಎಸ್‌ಐ ಕಿಶೋರ್ ಪಿ ವಿರುದ್ಧ ಸದ್ಯ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾದರೂ ಕಿಶೋರ್ ತನ್ನ ಪತ್ನಿ ಮೇಲೆ ನಡೆದಿರುವ ದೌರ್ಜನ್ಯದ ಬಹುತೇಕ ಕೃತ್ಯಗಳು ಧರ್ಮಸ್ಥಳದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ನಡೆದಿದೆ ಎನ್ನಲಾಗಿದ್ದು ಈ ಕಾರಣಕ್ಕಾಗಿ ಈ ಪ್ರಕರಣ ಚಂದ್ರ ಲೇಔಟ್ ಪೊಲೀಸ್ ಠಾಣೆಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಧರ್ಮಸ್ಥಳ ಠಾಣೆಯಲ್ಲಿ ಹೊಸದಾಗಿ ಎಫ್ಐಆರ್ ದಾಖಲಾಗಿ ತನಿಖೆ ನಡೆಯಬೇಕಿದೆ.