ರಾಮಕುಂಜದ ನೇಲಡ್ಕದಲ್ಲಿ ಸೇತುವೆ ಅಗತ್ಯತೆ: ಗ್ರಾಮಸ್ಥರಿಗೆ ಕೃಷ್ಣಪ್ಪ ಜಿ. ನೀಡಿದ ಭರವಸೆ ಏನು?

ರಾಮಕುಂಜ ಗ್ರಾಮದ ನೇಲಡ್ಕ ಎಂಬಲ್ಲಿ ಆಲಂಕಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಮರ್ಪಕ ಸೇತುವೆ ಇಲ್ಲದೆ ಮಳೆಗಾಲದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೀಡಾಗುತ್ತಿದ್ದು, ಗ್ರಾಮಸ್ಥರ ಆಹ್ವಾನದ ಮೇರೆಗೆ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಜಿ. ರಾಮಕುಂಜ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಭಾಗಕ್ಕೆ ಸುಮಾರು ₹1 ಕೋಟಿ ವೆಚ್ಚದ ಹೊಸ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಸಚಿವರ ಜೊತೆ ಚರ್ಚಿಸಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

kadaba times

ರಾಮಕುಂಜ: ರಾಮಕುಂಜ ಗ್ರಾಮದಿಂದ ಆಲಂಕಾರು ಸಂಪರ್ಕಿಸುವ ನೇಲಡ್ಕ ಎಂಬಲ್ಲಿ ಸಮರ್ಪಕ ಸೇತುವೆ ಸೌಲಭ್ಯವಿಲ್ಲದೆ ದಶಕಗಳಿಂದ ಮಳೆಗಾಲದಲ್ಲಿ ದ್ವೀಪದಂತಾಗುತ್ತಿರುವ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ಗ್ರಾಮಸ್ಥರ ಆಹ್ವಾನದ ಮೇರೆಗೆ ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಆಗಿರುವ  ಕೃಷ್ಣಪ್ಪ ಜಿ. ರಾಮಕುಂಜ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಗಾಲದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಜಲದಿಗ್ಬಂಧನ: ರಾಮಕುಂಜದಿಂದ ಆಲಂಕಾರು ಸಂಪರ್ಕಿಸುವ ರಸ್ತೆಯ ನೇಲಡ್ಕ ತೊರೆಗೆ ಈ ಹಿಂದೆ ನಿರ್ಮಿಸಲಾಗಿದ್ದ ಕಿರು ಸೇತುವೆಯು ಅತ್ಯಂತ ಹಳೆಯದಾಗಿದ್ದು, ಮಳೆಗಾಲದಲ್ಲಿ ನೀರಿನ ರಭಸಕ್ಕೆ ಮುಳುಗಿಹೋಗುತ್ತದೆ. ಈ ಮಾರ್ಗವನ್ನು ನಿತ್ಯ 50ಕ್ಕೂ ಹೆಚ್ಚು ಕುಟುಂಬಗಳು ಅವಲಂಬಿಸಿವೆ.

ಮುಖ್ಯವಾಗಿ ಮಳೆಗಾಲದಲ್ಲಿ ತೊರೆ ತುಂಬಿ ಹರಿದಾಗ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಕೃಷಿಕರು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳಬೇಕಾದ ರೋಗಿಗಳು ಜೀವ ಕೈಯಲ್ಲಿ ಹಿಡಿದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಎತ್ತರದ ಕಾಂಕ್ರೀಟ್ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು.

uniq
kadaba times

₹1 ಕೋಟಿ ಅನುದಾನದ ಅಗತ್ಯ :: ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದ ಕೃಷ್ಣಪ್ಪ ಜಿ. ಅವರು ಮಾತನಾಡಿ, “ನೇಲಡ್ಕ ಭಾಗದಲ್ಲಿ ಮಳೆಗಾಲದಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ಸಂಪರ್ಕ ಸಂಕಷ್ಟ ಅತ್ಯಂತ ಗಂಭೀರವಾಗಿದೆ. ಇಲ್ಲಿ ಸುಸಜ್ಜಿತ ಹಾಗೂ ಬಾಳಿಕೆ ಬರುವ ಸೇತುವೆ ನಿರ್ಮಿಸಲು ಅಂದಾಜು ₹1 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಈ ಕುರಿತು ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಬಳಿಗೆ ನಿಯೋಗ ತೆರಳಿ ಯೋಜನಾ ಪ್ರಸ್ತಾವನೆ ಸಲ್ಲಿಸಿ, ವಿಶೇಷ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯತೀಶ್ ಬಾನಡ್ಕ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ದೊಡ್ಡ ಉರ್ಕ ಹಾಗೂ ರಸ್ತೆ ಬಳಕೆದಾರರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಸೇತುವೆಯ ಅಗತ್ಯತೆಯನ್ನು ವಿವರಿಸಿದರು.

Related Articles

Latest Articles