ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆ ಪ್ರಕ್ರಿಯೆ ಬಿರುಸಾಗಿ ಸಾಗುತ್ತಿರುವ ನಡುವೆಯೇ, ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಗುರುತಿನ ಕುರಿತಂತೆ ಸಲ್ಲಿಕೆಯಾಗಿದ್ದ ದೂರಿಗೆ ಎಸ್‌ಐಟಿಗೆ ಯಾವುದೇ ಅನುಮಾನಗಳಿಲ್ಲ, ಅನಗತ್ಯ ಹಾಗೂ ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ಹಿರಿಯ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು / ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕುಸುಮಾವತಿ ಮತ್ತು ಸೌಜನ್ಯ ಅವರ ಸಂಬಂಧದ ಕುರಿತು ಅನುಮಾನವಿದೆ ಎಂದು ಧರ್ಮಸ್ಥಳ ಗ್ರಾಮದ ಕಿಶೋರ್ ಎಂಬವರು ಎಸ್‌ಐಟಿಗೆ ಮನವಿ ಮಾಡಿದ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸೌಜನ್ಯ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ಈ ಬಗ್ಗೆ, ನಾವು ನಮ್ಮ ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಮಾಧ್ಯಮಗಳಿಗೆ ಅವರು ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಂತಹ ಯಾವುದೇ ಕೇಸ್ ಗಳಿದ್ದರೆ ಸ್ಥಳೀಯ ಪೊಲೀಸರು ಅದರ ಬಗ್ಗೆ ಗಮನಿಸಬಹುದು ಎಂದು ಸ್ಪಷ್ಟನೆಯಲ್ಲಿ ಸುಧೀರ್ ರೆಡ್ಡಿ ಉಲ್ಲೇಖಿಸಿದ್ದಾರೆ.
ಕಿಶೋರ್ ನೀಡಿದ ದೂರಿನಲ್ಲೇನಿತ್ತು?: ಧರ್ಮಸ್ಥಳದ ನಿವಾಸಿ ಕಿಶೋರ್ ಎಂಬವರು ಮಂಗಳೂರಿನ ಎಸ್‌ಐಟಿ ಕಚೇರಿಗೆ ತೆರಳಿ ಸೌಜನ್ಯ ಮತ್ತು ಕುಸುಮಾವತಿ ಅವರ ನಡುವಿನ ಸಂಬಂಧದ ಕುರಿತು ತನಿಖೆ ನಡೆಸುವಂತೆ ಲಿಖಿತ ದೂರು ಸಲ್ಲಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ. ಕಿಶೋರ್ ತಮ್ಮ ದೂರಿನಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದರು:
-
ಅಕ್ರಮ-ಸಕ್ರಮ ಜಮೀನು ವಿವಾದ: 2015ರಲ್ಲಿ ಇಂದಿರಾವತಿ ಎಂಬ ಮಹಿಳೆಯ ಹೆಸರಿನಲ್ಲಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಮಂಜೂರಾಗಿದ್ದು, ಈ ಜಮೀನಿನ ದಾಖಲೆಗಳು ಹಾಗೂ ಗುರುತಿನ ಪುರಾವೆಗಳನ್ನು ಪರಿಶೀಲಿಸಬೇಕು.


-
ಹೆಸರಿನಲ್ಲಿ ವ್ಯತ್ಯಾಸದ ಆರೋಪ: ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಾಗಿ ನೀಡಿರುವ ಪ್ರಮಾಣಪತ್ರದ ಸತ್ಯಾಸತ್ಯತೆ ತನಿಖೆಯಾಗಬೇಕು. ಅವರ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಳಲ್ಲಿ ದಾಖಲೆಗಳ ವ್ಯತ್ಯಾಸವಿದೆ.
-
ದಾಖಲೆಗಳು ಹಾಗೂ ವೈಜ್ಞಾನಿಕ ಪರೀಕ್ಷೆ: ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಅವರ ಜನನ ಪ್ರಮಾಣಪತ್ರ, ಆಸ್ಪತ್ರೆ ಹಾಗೂ ಶಾಲಾ ದಾಖಲಾತಿಗಳನ್ನು ಪರಿಶೀಲಿಸಬೇಕು, ವಂಶವೃಕ್ಷ ಹಾಗೂ ನೆರೆಹೊರೆಯವರ ಹೇಳಿಕೆ ಪಡೆಯಬೇಕು ಮತ್ತು ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದರು. ಈ ಹಿಂದೆ ಈ ಬಗ್ಗೆ ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತರಿಗೂ (AC) ದೂರು ನೀಡಿರುವುದಾಗಿ ಅವರು ತಿಳಿಸಿದ್ದರು.
ಆದರೆ, ಎಸ್‌ಐಟಿ ತಂಡವು ಈಗಾಗಲೇ ನ್ಯಾಯಾಲಯದ ಸಮ್ಮುಖದಲ್ಲಿ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ (DNA) ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಕಾನೂನಾತ್ಮಕ ತನಿಖೆಯನ್ನು ಚುರುಕುಗೊಳಿಸಿದೆ.
