ಕಡಬ ಮೂಲದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೋರ್ವರಿಗೆ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ, ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನಿಸಿ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಜಯರಾಮ ಎಂಬವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಜಮೀನಿನ ಕಂದಾಯ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ನಿರ್ಜನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಮತ್ತು ಮಾನಭಂಗಕ್ಕೆ ಯತ್ನಿಸಿದ ಗಂಭೀರ ಆರೋಪದಡಿ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಜಯರಾಮ ಎಂಬವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದ ಯುವತಿ: ದೂರಿನ ವಿವರಗಳ ಪ್ರಕಾರ, ಕಡಬ ಮೂಲದ ಸಂತ್ರಸ್ತ ಯುವತಿ ಮಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಡಬದಿಂದ ಪ್ರತಿದಿನ ಮಂಗಳೂರಿಗೆ ಸಂಚರಿಸುವುದು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ, ಜೂನ್ ತಿಂಗಳಿನಿಂದ ಮಂಗಳೂರಿನ ತಮ್ಮ ಸಹಪಾಠಿಯೊಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ (PG) ಆಗಿ ಉಳಿದುಕೊಂಡಿದ್ದರು.
ಈ ಅವಧಿಯಲ್ಲಿ ಯುವತಿಯು ತನ್ನ ಸ್ವಗ್ರಾಮದಲ್ಲಿರುವ ಕುಟುಂಬದ ಜಮೀನಿನ ದಾಖಲೆಗಳಲ್ಲಿರುವ ಗೊಂದಲ ಮತ್ತು ಸಮಸ್ಯೆಗಳ ಬಗ್ಗೆ ಸಹಪಾಠಿ ಮಮತಾ ಅವರಲ್ಲಿ ಚರ್ಚಿಸಿದ್ದರು. ಇದನ್ನು ತಿಳಿದ ಸಹಪಾಠಿಯ ಪತಿ ತನಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಂಪರ್ಕವಿದ್ದು, ದಾಖಲೆಗಳನ್ನು ತಾನೇ ಮುಂದೆ ನಿಂತು ಸರಿಪಡಿಸಿಕೊಡುವುದಾಗಿ ಯುವತಿಗೆ ಭರವಸೆ ನೀಡಿದ್ದರು.
ಶಾಸಕರ ಭೇಟಿ ನೆಪದಲ್ಲಿ ಮನೆಗೆ ಕರೆದೊಯ್ದು ಕೃತ್ಯಕ್ಕೆ ಯತ್ನ: ಅದರಂತೆ, ಆಗಸ್ಟ್ 17ರಂದು ಯುವತಿಯ ಮನೆಯ ಜಮೀನಿನ ಕಡತಗಳನ್ನು ಪಡೆದುಕೊಂಡಿದ್ದ ವ್ಯಕ್ತಿ , ಆಕೆಯನ್ನು ಪುತ್ತೂರು ಶಾಸಕರ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಅಂದು ಶಾಸಕರು ಕಚೇರಿಯಲ್ಲಿ ಸಿಗದ ಕಾರಣ ಇಬ್ಬರೂ ಮಂಗಳೂರಿಗೆ ಹಿಂತಿರುಗಿದ್ದರು.


ನಂತರ ಆಗಸ್ಟ್ 23ರಂದು ಯುವತಿಗೆ ಕರೆ ಮಾಡಿದ ಆರೋಪಿ, “ದಾಖಲೆ ಸರಿಪಡಿಸಲು ಶಾಸಕರನ್ನು ಭೇಟಿ ಮಾಡಬೇಕಿದೆ, ಮರುದಿನ ಒಬ್ಬರೇ ಪುತ್ತೂರಿಗೆ ಬನ್ನಿ” ಎಂದು ತಿಳಿಸಿದ್ದರು. ಇದನ್ನು ನಂಬಿ ಆಗಸ್ಟ್ 24ರಂದು ಪುತ್ತೂರಿಗೆ ಆಗಮಿಸಿದ ಯುವತಿಯನ್ನು, “ಶಾಸಕರು ಕಚೇರಿಯಲ್ಲಿಲ್ಲ, ಮನೆ ಬಳಿ ಹೋಗೋಣ” ಎಂದು ಹೇಳಿ ನೆಲ್ಲಿಗುಂಡಿಯಲ್ಲಿರುವ ತಮ್ಮ ಮನೆಗೆ ಸ್ಕೂಟರ್ನಲ್ಲಿ ಕರೆದೊಯ್ದಿದ್ದರು.
ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಮನೆಯ ಬಾಗಿಲು ಹಾಕಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಬರಿಗೊಂಡ ಯುವತಿ ಪ್ರತಿರೋಧ ವ್ಯಕ್ತಪಡಿಸಿ, ಕೂಗಾಟ ನಡೆಸಿ ಹೇಗೋ ಬಾಗಿಲು ತೆರೆದು ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ. ಈ ವೇಳೆ “ವಿಷಯವನ್ನು ಯಾರಿಗಾದರೂ ಬಾಯಿಬಿಟ್ಟರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ” ಎಂದು ಆರೋಪಿ ಪ್ರಾಣಬೆದರಿಕೆ ಒಡ್ಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಮಂಗಳೂರಿನಲ್ಲೂ ಮುಂದುವರಿದ ಕಿರುಕುಳ – ಕೊನೆಗೂ ದೂರು ದಾಖಲು: ಈ ಘಟನೆಯ ನಂತರವೂ ಆರೋಪಿ ಮಂಗಳೂರಿನ ಕೊಟ್ಟಾರಚೌಕಿ ಮನೆಯಲ್ಲೂ ಯುವತಿಗೆ ಪದೇಪದೇ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿ, ತನ್ನ ಅನುಚಿತ ಬೇಡಿಕೆಗೆ ಒಪ್ಪುವಂತೆ ನಿರಂತರ ಒತ್ತಡ ಹೇರುತ್ತಿದ್ದನೆಂದು ಯುವತಿ ಆರೋಪಿಸಿದ್ದಾರೆ. ಆರೋಪಿಯ ಜೀವಬೆದರಿಕೆಗೆ ಹೆದರಿ ಹಾಗೂ ಕುಟುಂಬದ ಮಾನ-ಮರ್ಯಾದೆಯ ಆತಂಕದಿಂದ ಇಷ್ಟು ದಿನ ಮೌನವಾಗಿದ್ದ ಯುವತಿ, ಕೊನೆಗೆ ಪೋಷಕರಿಗೆ ನಡೆದ ಘಟನೆಯ ವಿವರ ತಿಳಿಸಿ ಧೈರ್ಯವಾಗಿ ಠಾಣೆಯ ಮೆಟ್ಟಿಲೇರಿದ್ದಾರೆ.
ಯುವತಿ ನೀಡಿದ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಯರಾಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪದ ಸತ್ಯಾಸತ್ಯತೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.
