ಕಡಬ ತಾಲೂಕಿನ ಎಡಮಂಗಲ ಸಮೀಪದ ಪೊಯ್ಯತ್ತೂರು ನಿವಾಸಿ, ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಇದೀಗ ಕೇರಳದ ಕಾಸರಗೋಡು ಜಿಲ್ಲೆಯ ಹೊಸಂಗಡಿಯ ಹೋಟೆಲೊಂದರಲ್ಲಿ ಪತ್ತೆಯಾಗಿದ್ದಾನೆ. ಬೆಳ್ಳಾರೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ಳಾರೆ / ಕಡಬ: ಕಾಲೇಜಿಗೆ ತೆರಳಿದ ವಿದ್ಯಾರ್ಥಿಯೋರ್ವ ಮನೆಗೂ ಮರಳದೆ ದಿಢೀರನೆ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ನಾಪತ್ತೆಯಾಗಿದ್ದ ವಿದ್ಯಾರ್ಥಿಯು ಗಡಿಭಾಗವಾದ ಕಾಸರಗೋಡಿನ ಹೊಸಂಗಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪೊಯ್ಯತ್ತೂರು ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ, ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀವತ್ಸ ಎಂದು ಗುರುತಿಸಲಾಗಿದೆ.
ಕಾಲೇಜಿಗೆ ಹೋದವನು ಮನೆಗೆ ಮರಳಿರಲಿಲ್ಲ: ವಿದ್ಯಾರ್ಥಿ ಶ್ರೀವತ್ಸ ಅಕ್ಟೋಬರ್ 22ರಂದು ಎಂದಿನಂತೆ ಕೊಂಬೆಟ್ಟು ಕಾಲೇಜಿಗೆಂದು ಮನೆಯಿಂದ ತೆರಳಿದ್ದು, ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಕಾಲೇಜು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ಬೆಳ್ಳಾರೆ ಪೊಲೀಸ್ ಠಾಣೆಗೆ ತೆರಳಿ ಮಗ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು.


ದೂರು ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಯ ಪತ್ತೆಗೆ ಮಾಹಿತಿ ಕಲೆಹಾಕಿದ್ದರು.
ಹೊಸಂಗಡಿ ಹೋಟೆಲ್ನಲ್ಲಿ ಪತ್ತೆ:ಪೊಲೀಸರು ನಡೆಸಿದ ನಿರಂತರ ಹುಡುಕಾಟದ ಫಲವಾಗಿ ವಿದ್ಯಾರ್ಥಿಯು ಕೇರಳ ರಾಜ್ಯದ ಕಾಸರಗೋಡು ಗಡಿಭಾಗದ ಹೊಸಂಗಡಿಯ ಹೋಟೆಲೊಂದರಲ್ಲಿ ಇರುವುದು ಖಚಿತವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬೆಳ್ಳಾರೆ ಪೊಲೀಸರ ತಂಡ ಹೊಸಂಗಡಿಗೆ ಧಾವಿಸಿ, ಹೋಟೆಲ್ನಲ್ಲಿದ್ದ ವಿದ್ಯಾರ್ಥಿ ಶ್ರೀವತ್ಸನನ್ನು ವಶಕ್ಕೆ ಪಡೆದುಕೊಂಡಿದೆ.
ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದಾರೆ. .
