
ರಾಮಕುಂಜ ಗ್ರಾಮದ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಯಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಟೋಬರ್ 6ರಂದು ರಾತ್ರಿ ನಡೆದಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಡಬ: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಅಕ್ಟೋಬರ್ 6ರಂದು ರಾತ್ರಿ ಸಂಭವಿಸಿದೆ.
ರಾಮಕುಂಜ ಗ್ರಾಮದ ಕೆದಿಲ ನಿವಾಸಿ ಅಶೋಕ ಕೆ. (54) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಘಟನೆಯ ವಿವರ: ಅಶೋಕ್ ಅವರು ಅಕ್ಟೋಬರ್ 6ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ಅಮಲು ಪದಾರ್ಥ ಸೇವಿಸಿ ಮನೆಗೆ ಮರಳಿದ್ದರು. ರಾತ್ರಿ ಸುಮಾರು 8:30ರ ವೇಳೆಗೆ ಊಟ ಮುಗಿಸಿದ ನಂತರ, ಪಕ್ಕದಲ್ಲೇ ಇದ್ದ ತಮ್ಮ ಇನ್ನೊಂದು ಮನೆಗೆ ಹೋಗಿದ್ದರು.


ರಾತ್ರಿ 10:45ರ ಸುಮಾರಿಗೆ ಅಶೋಕ್ ಅವರ ಬಳಿ ಯಾವುದೋ ವಿಷಕಾರಿ ಪದಾರ್ಥದ ವಾಸನೆ ಬರುತ್ತಿದ್ದು, ಅವರು ವಿಪರೀತ ಕೆಮ್ಮು ಮತ್ತು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ತಲುಪಿದಾಗ ರಾತ್ರಿ 11:34ರ ಸುಮಾರಿಗೆ ಪರೀಕ್ಷಿಸಿದ ವೈದ್ಯರು, ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ಹಿಂದೆಯೂ ನಡೆದಿತ್ತು ಆತ್ಮಹತ್ಯೆ ಯತ್ನ: ಅಶೋಕ್ ಅವರು ವಿಪರೀತ ಮದ್ಯ ಸೇವನೆಯ ಚಟಕ್ಕೆ ದಾಸರಾಗಿದ್ದು, ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರು ಈ ಹಿಂದೆಯೂ ಸುಮಾರು 5 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಅಶೋಕ್ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದ್ದಲ್ಲಿದ್ದು ಆ ಬಳಿಕ ಊರಿಗೆ ಬಂದು ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಬಳಿಕ ಟೈಲರ್ ವೃತ್ತಿ ಬಿಟ್ಟು ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು
ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ವೀಣಾ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
