ಮಾರ್ಗಸೂಚಿ ನಾಮಫಲಕ ಕೊಡುಗೆ ನೀಡಿದ ಪೂರ್ವ ವಿದ್ಯಾರ್ಥಿ ದಂಪತಿ

kadaba times

ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ 25ನೇ ವರ್ಷದ ಬೆಳ್ಳಿಹಬ್ಬದ ಮಹೋತ್ಸವ ಹಾಗೂ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ, ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ದಿನೇಶ್ (ಸಂಗೀತಾ ಎಲೆಕ್ಟ್ರಾನಿಕ್ಸ್) ಹಾಗೂ ಶ್ರೀಮತಿ ಪ್ರಣೀತಾ ದಂಪತಿ ಕಾಲೇಜು ಸಂಪರ್ಕ ರಸ್ತೆಗೆ ಮಾರ್ಗಸೂಚಿ ನಾಮಫಲಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಕಡಬ ತಾಲೂಕು ಆಡಳಿತ ಸೌಧದ ಸಮೀಪ ಅಳವಡಿಸಲಾದ ಈ ನಾಮಫಲಕವನ್ನು ದುರ್ಗಾಂಬಾ ಎಂಟರ್‌ಪ್ರೈಸಸ್ ಮಾಲಕ ದಯಾನಂದ ಗೌಡ ಅರಿಗ ಉದ್ಘಾಟಿಸಿದರು.

kadaba times
uniq

ಕಡಬ:ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರ ಹಾಗೂ 25ನೇ ವರ್ಷದ ಬೆಳ್ಳಿಹಬ್ಬ ಮಹೋತ್ಸವದ ಸಂದರ್ಭದಲ್ಲಿ, ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂತನ ಮಾರ್ಗಸೂಚಿ ನಾಮಫಲಕವನ್ನು ಅಳವಡಿಸುವ ಮೂಲಕ ಕಾಲೇಜಿನ ಪೂರ್ವ ವಿದ್ಯಾರ್ಥಿ ದಂಪತಿ ಸಮಾಜಮುಖಿ ಕಾಯಕಕ್ಕೆ ಕೈಜೋಡಿಸಿ ಮಾದರಿಯಾಗಿದ್ದಾರೆ.

ಕಡಬ ತಾಲೂಕು ಆಡಳಿತ ಸೌಧದ ಸಮೀಪದಲ್ಲಿರುವ ಕಾಲೇಜು ಸಂಪರ್ಕ ರಸ್ತೆಯಲ್ಲಿ ನೂತನವಾಗಿ ಅಳವಡಿಸಲಾದ ಈ ಮಾರ್ಗಸೂಚಿ ನಾಮಫಲಕವನ್ನು ಭಾನುವಾರ ದುರ್ಗಾಂಬಾ ಎಂಟರ್‌ಪ್ರೈಸಸ್‌ನ ಮಾಲಕ ದಯಾನಂದ ಗೌಡ ಅರಿಗ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ದಿನೇಶ್ (ಸಂಗೀತಾ ಎಲೆಕ್ಟ್ರಾನಿಕ್ಸ್) ಹಾಗೂ ಶ್ರೀಮತಿ ಪ್ರಣೀತಾ ದಂಪತಿ ಈ ಮಾರ್ಗಸೂಚಿ ನಾಮಫಲಕವನ್ನು ಪ್ರಾಯೋಜಿಸಿ ಕೊಡುಗೆ ನೀಡುವ ಮೂಲಕ ತಮಗೆ ಶಿಕ್ಷಣ ನೀಡಿದ ಸಂಸ್ಥೆಯ ಮೇಲಿನ ಅಪಾರ ಪ್ರೀತಿ ಮತ್ತು ಕೃತಜ್ಞತೆಯನ್ನು ಮೆರೆದಿದ್ದಾರೆ.

 “ನಾವು ಕಲಿತು ಬೆಳೆದ ಸಂಸ್ಥೆಯನ್ನು ಎಂದಿಗೂ ಮರೆಯಬಾರದು. ನಮಗೆ ಬದುಕಿನ ದಾರಿ ತೋರಿಸಿದ ನೆಲೆಗೆ ನಮ್ಮಿಂದಾದ ಅಳಿಲು ಸೇವೆಯ ಕೊಡುಗೆಯನ್ನು ನೀಡಿದ್ದೇವೆ. ಇದು ಪ್ರತಿಯೊಬ್ಬ ಹಳೆ ವಿದ್ಯಾರ್ಥಿಗೂ ತಮ್ಮ ಶಾಲಾ-ಕಾಲೇಜುಗಳ ಅಭಿವೃದ್ಧಿಯಲ್ಲಿ ಕೈಜೋಡಿಸಲು ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ” :ನಾಮಫಲಕ ಕೊಡುಗೆ ನೀಡಿದ ಪೂರ್ವ ವಿದ್ಯಾರ್ಥಿ ದಿನೇಶ್

kadaba times
kadaba times

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಡಬ ಪೊಲೀಸ್ ಠಾಣಾಧಿಕಾರಿ ಕೌಶಿಕ್ ಹಾಗೂ ಜೆಸಿಐ ಕಡಬ ಕದಂಬ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರು ಶುಭ ಹಾರೈಸಿದರು.

 “ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಲ್ಲ; ಅವು ಸತ್ಪ್ರಜೆಗಳನ್ನು ನಿರ್ಮಿಸುವ, ಬದುಕಿಗೆ ದಾರಿ ತೋರುವ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯ ಅರಿವು ಮೂಡಿಸುವ ಕೇಂದ್ರಗಳಾಗಿವೆ. ಸಂಸ್ಥೆಯಲ್ಲಿ ಕಲಿತು ಬದುಕಿನಲ್ಲಿ ಯಶಸ್ಸು ಕಂಡವರು, ತಾವು ಕಲಿತ ಶಾಲೆ-ಕಾಲೇಜಿನ ಪ್ರಗತಿಗೆ ಕೈಜೋಡಿಸುವುದು ಇತರರಿಗೂ ಪ್ರೇರಣೆಯಾಗಿದೆ. ಈ ಮಾರ್ಗಸೂಚಿ ನಾಮಫಲಕವು ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಗೆ ದಾರಿ ತೋರುವ ಉಪಯುಕ್ತ ವ್ಯವಸ್ಥೆಯಾಗಿದೆ. ಸಣ್ಣದಾಗಿ ಕಾಣುವ ಇಂತಹ ಕೊಡುಗೆಗಳು ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುತ್ತವೆ” :- ವಾಸುದೇವ ಗೌಡ ಕೋಲ್ಪೆ (ಕಾಲೇಜಿನ ಹಿರಿಯ ಉಪನ್ಯಾಸಕರು)

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವರಾಜ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸೆಲೀನ್ ಕೆ.ಪಿ., ಸಹಕಾರ್ಯಕ್ರಮಾಧಿಕಾರಿ ಶ್ರೀಮತಿ ಲಾವಣ್ಯ ಹೇಮಂತ್, ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಕಾಲೇಜು ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್, ಶಿಬಿರ ಸಮಿತಿಯ ಸಂಚಾಲಕ ಶಿವಪ್ರಸಾದ್ ಮೈಲೇರಿ, ಎಸ್‌ಡಿಎಂಸಿ ಅಧ್ಯಕ್ಷ ಜನಾರ್ದನ ಗೌಡ ಬಲ್ಯ, ಕಾಲೇಜು ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಕಾರ್ತಿಕ್ ಪಿಜಕಳ ಸೇರಿದಂತೆ ಬೋಧಕ ವರ್ಗ ಹಾಗೂ ಪೂರ್ವ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Latest Articles