ಪಂಜಾಬ್ ಟು ಮಂಗಳೂರು: ವಾಟರ್ ಪ್ಯೂರಿಫೈಯರ್ ಸೀಕ್ರೆಟ್ ಪ್ಲಾನ್

kadaba times

ಪಂಜಾಬ್‌ನ ಅಮೃತಸರದಿಂದ ವಾಟರ್ ಪ್ಯೂರಿಫೈಯರ್ ಒಳಗೆ ಬಚ್ಚಿಟ್ಟು ಕೊರಿಯರ್ ಮೂಲಕ ತರಿಸಲಾಗಿದ್ದ ಬರೋಬ್ಬರಿ ₹1.58 ಕೋಟಿ ಮೌಲ್ಯದ 1.79 ಕೆಜಿ ಎಂಡಿಎಂಎ (MDMA) ಮಾದಕವಸ್ತುವನ್ನು ಮಂಗಳೂರು ಸಿಸಿಬಿ ಪೊಲೀಸರು ಸಿನಿಮೀಯ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಕುಖ್ಯಾತ ಪೆಡ್ಲರ್‌ಗಳನ್ನು ಬಂಧಿಸಿದ್ದು, ಒಟ್ಟು ₹1.63 ಕೋಟಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.

kadaba times
uniq

ಮಂಗಳೂರು: ಮಂಗಳೂರು ನಗರ ಹಾಗೂ ಕೇರಳ ಭಾಗದಲ್ಲಿ ಯುವಜನತೆ ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಿಷೇಧಿತ ಸಿಂಥೆಟಿಕ್ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡಲು ರೂಪಿಸಲಾಗಿದ್ದ ಅಂತರರಾಜ್ಯ ದಂಧೆಯ ಜಾಲವನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಪಂಜಾಬ್‌ನಿಂದ ಕೊರಿಯರ್ ಮೂಲಕ ಪಾರ್ಸಲ್ ತರಿಸಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ ₹1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1 ಕೆಜಿ 796.96 ಗ್ರಾಂ MDMA ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಕುಂಪಲ ಡಿಮಾರ್ಟ್ ಬಳಿ ರಾತ್ರಿ ನಡೆದ ಮಿಂಚಿನ ಕಾರ್ಯಾಚರಣೆ: ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು ಮಾರಾಟಕ್ಕೆ ಸಿದ್ಧತೆ ನಡೆಸಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಕ್ಟೋಬರ್ 8ರ ಗುರುವಾರ ರಾತ್ರಿ  ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಸಮೀಪ ದಾಳಿ ನಡೆಸಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಿಂದ ಎಂಡಿಎಂಎ ಜೊತೆಗೆ ಕೃತ್ಯಕ್ಕೆ ಬಳಸಲಾದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ ರಿಕ್ಷಾ, 3 ಮೊಬೈಲ್ ಫೋನ್‌ಗಳು, ಕೊರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ಅನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ₹1,63,84,000 (ಒಂದು ಕೋಟಿ ಅರವತ್ಮೂರು ಲಕ್ಷದ ಎಂಬತ್ತನಾಲ್ಕು ಸಾವಿರ) ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳ ವಿವರ:

  1. ಅಬ್ದುಲ್ ಹಾಫೀಲ್ (25): ವಾಸ: ಅನೀಸಾ ಮಂಜಿಲ್, ಬೈದಲಾ ಪೋಸ್ಟ್, ಮಂಗಲ್ಪಾಡಿ, ಕಾಸರಗೋಡು ಜಿಲ್ಲೆ (ಕೇರಳ).

    kadaba times
    kadaba times
  2. ಜಿಯಾವುಲ್ ಹಕ್ (30): ವಾಸ: #1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು.

  3. ಅಲ್ತಾಫ್ (28): ಹಾಲಿ ವಾಸ: ಫ್ಲ್ಯಾಟ್ ನಂ. 201, ಆಯಿಷಾ ಅಪಾರ್ಟ್‌ಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು (ಸ್ವಂತ ವಿಳಾಸ: ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್, ಮಂಗಳೂರು).

ಆರೋಪಿಗಳ ಹಿನ್ನೆಲೆ – ದುಬೈ ಜೈಲುವಾಸಿ ಭಾಗಿ: ಬಂಧಿತ ಆರೋಪಿಗಳ ಪೈಕಿ ಜಿಯಾವುಲ್ ಹಕ್ ಎಂಬಾತ ಈ ಹಿಂದೆ ದುಬೈ ದೇಶದ ರಾಸ್ ಅಲ್-ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದು, 3 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸಾಗಿದ್ದ. ಮತ್ತೊಬ್ಬ ಆರೋಪಿ ಅಬ್ದುಲ್ ಹಾಫೀಲ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಹಾಗೂ ಅಲ್ತಾಫ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಈ ಹಿಂದೆ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು.

ಪಂಜಾಬ್ ಟು ಮಂಗಳೂರು: ವಾಟರ್ ಪ್ಯೂರಿಫೈಯರ್ ಸೀಕ್ರೆಟ್ ಪ್ಲಾನ್: ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಬೃಹತ್ ಪ್ರಮಾಣದ ಎಂಡಿಎಂಎ ಖರೀದಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಲು ವಾಟರ್ ಪ್ಯೂರಿಫೈಯರ್‌ನ ಒಳಭಾಗದ ನೀರಿನ ಟ್ಯಾಂಕ್‌ನಲ್ಲಿ ಎಂಡಿಎಂಎ ಪೊಟ್ಟಣಗಳನ್ನು ಭದ್ರವಾಗಿ ಅಡಗಿಸಿಟ್ಟು, ಕೊರಿಯರ್ ಮೂಲಕ ಮಂಗಳೂರಿಗೆ ರವಾನಿಸಿಕೊಂಡಿದ್ದರು.

ಕೊರಿಯರ್ ಪಾರ್ಸಲ್ ಸ್ವೀಕರಿಸಿ, ಮಂಗಳೂರು ನಗರ ಹಾಗೂ ನೆರೆಯ ಕೇರಳ ರಾಜ್ಯದ ವಿವಿಧೆಡೆ ಮಾರಾಟ ಮಾಡುವ ಮುನ್ನವೇ ಸಿಸಿಬಿ ಪೊಲೀಸರು ಜಾಲವನ್ನು ಆರಂಭದಲ್ಲೇ ಪತ್ತೆಹಚ್ಚಿ ವಿಫಲಗೊಳಿಸಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

Related Articles

Latest Articles