
ಕಡಬ:ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 7ನೇ ವಾರ್ಡ್ಗೆ ಒಳಪಡುವ ಗೌಡ ಸಮಾಜದ ಮುಂಭಾಗದಿಂದ ಹಾದುಹೋಗುವ ಪಣೆಮಜಲು, ಕಳಾರ, ಕುದ್ಕೋಳಿ ಹಾಗೂ ಕೆಣೆಜಾಲು ರಸ್ತೆ ಸಂಪೂರ್ಣ ಹಸೆಗೆಟ್ಟು ಕೆಸರುಮಯವಾಗಿದೆ.


ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಲು ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಕೃಷಿಕರು ಮತ್ತು ಕೂಲಿ ಕಾರ್ಮಿಕರ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ನಿತ್ಯವೂ ಇದೇ ರಸ್ತೆಯನ್ನು ನೆಚ್ಚಿಕೊಂಡಿದ್ದಾರೆ.
ಮಳೆಯ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮುಖ್ಯ ಮಣ್ಣಿನ ರಸ್ತೆಯ ಮೇಲೆಯೇ ನೀರು ರಭಸವಾಗಿ ಹರಿದು ಸಂಪೂರ್ಣ ಕೆಸರುಮಯವಾಗಿದೆ. ಇದರಿಂದಾಗಿ ಶಾಲಾ-ಕಾಲೇಜು ಮಕ್ಕಳು, ವೃದ್ಧರು ಹಾಗೂ ರೋಗಿಗಳು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಸಂಚರಿಸಲಾಗದೆ ಅರ್ಧ ದಾರಿಯಲ್ಲೇ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
2022 ರಿಂದ ಸಾಲು ಸಾಲು ಮನವಿ ಸಲ್ಲಿಕೆ
ರಸ್ತೆ ದುರಸ್ತಿ ಹಾಗೂ ಕಾಂಕ್ರೀಟೀಕರಣಕ್ಕಾಗಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪಟ್ಟಣ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ:
-
29 ಜುಲೈ 2022: ಕಡಬ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಅಧಿಕೃತ ಮನವಿ ಸಲ್ಲಿಕೆ.


-
07 ಜುಲೈ 2023: ರಸ್ತೆ ದುರಸ್ತಿಗೆ ಆಗ್ರಹಿಸಿ ಪ.ಪಂ. ಆಡಳಿತಕ್ಕೆ ರಸೀದಿ ಸಹಿತ ಮನವಿ.
-
07 ಡಿಸೆಂಬರ್ 2023: ಡಿಸೆಂಬರ್ 2022ರಲ್ಲಿ ನಿರ್ಮಿಸಲಾದ ಕೇವಲ 60 ಮೀಟರ್ ಕಾಂಕ್ರೀಟ್ ರಸ್ತೆ 4 ತಿಂಗಳಲ್ಲೇ ಸಂಪೂರ್ಣ ಹಾಳಾಗಿದ್ದು, ಕಳಪೆ ಕಾಮಗಾರಿ ತನಿಖೆಗೆ ಒತ್ತಾಯಿಸಿ ಮನವಿ.
-
17 ಫೆಬ್ರವರಿ 2025 & 31 ಅಕ್ಟೋಬರ್ 2025: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪುನಃ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆ.
ಇಷ್ಟೆಲ್ಲಾ ಲಿಖಿತ ದಾಖಲೆಗಳೊಂದಿಗೆ ಸತತವಾಗಿ ಮನವಿ ಸಲ್ಲಿಸಿದ್ದರೂ, ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ತಕ್ಷಣವೇ ಕೆಸರುಮಯ ರಸ್ತೆಯನ್ನು ದುರಸ್ತಿಗೊಳಿಸಿ ಕಾಂಕ್ರೀಟೀಕರಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
