
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜುಲೈ 31ರಂದು ಸುರಿದ ಭಾರಿ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ನದಿಯ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ನದಿಯಲ್ಲಿ ತೀರ್ಥಸ್ನಾನ ಮಾಡುವುದನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಡ್ರಮ್ಗಳಲ್ಲಿ ತೀರ್ಥಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.


ಸುಬ್ರಹ್ಮಣ್ಯ:ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಶುಕ್ರವಾರ (ಜುಲೈ 31) ಭಾರಿ ಮಳೆಯಾಗುತ್ತಿದ್ದು, ಕುಮಾರಧಾರ ನದಿಯ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದೆ. ಭಾರಿ ಹರಿವಿನಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ಮುಖ್ಯ ಕುಮಾರಧಾರ ನದಿಯ ಸ್ನಾನಘಟ್ಟವು ಸಂಜೆಯ ವೇಳೆಗೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ನದಿಯ ಹರಿವು ತೀವ್ರಗೊಂಡ ಪರಿಣಾಮ ಸ್ನಾನಘಟ್ಟದ ಸಮೀಪದಲ್ಲಿದ್ದ ಶೌಚಾಲಯ, ಡ್ರೆಸ್ಸಿಂಗ್ ರೂಮ್ ಹಾಗೂ ಇತರ ಪ್ರಮುಖ ಕಟ್ಟಡಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಮುನ್ನೆಚ್ಚರಿಕಾ ಕ್ರಮ: ತೀರ್ಥಸ್ನಾನ ನಿಷೇಧ
ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿರುವುದರಿಂದ, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಕೆಲವು ದಿನಗಳಿಂದಲೇ ಭಕ್ತಾದಿಗಳಿಗೆ ನದಿಯಲ್ಲಿ ಇಳಿದು ತೀರ್ಥಸ್ನಾನ ಮಾಡುವುದನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರು ನಿಷೇಧಿಸಿದ್ದಾರೆ.


ಸ್ನಾನಘಟ್ಟದ ರಕ್ಷಾಣಾ ಗೋಡೆ ಹಾಗೂ ನದಿಯ ಬದಿಗೆ ಸುರಕ್ಷತಾ ಬೇಲಿಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಹೆಲ್ಪ್ಲೈನ್ ಸೆಂಟರ್ (Police Helpline) ಮೂಲಕ ಜಾಗರೂಕತೆಯ ಸಂದೇಶಗಳನ್ನು ನೀಡಲಾಗುತ್ತಿದೆ.
ಭಕ್ತರ ಅನುಕೂಲಕ್ಕೆ ‘ಪರ್ಯಾಯ ಡ್ರಮ್’ ಸ್ನಾನದ ವ್ಯವಸ್ಥೆ
ನದಿಯಲ್ಲಿ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ ಹೇರಿದ್ದರೂ, ದೂರದೂರುಗಳಿಂದ ಹರಿಕೆ ಹಾಗೂ ಪೂಜೆಗಾಗಿ ಆಗಮಿಸುವ ಭಕ್ತಾದಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸ್ನಾನಘಟ್ಟದ ಸುರಕ್ಷಿತ ಎತ್ತರದ ಪ್ರದೇಶದಲ್ಲಿ ದೊಡ್ಡ ನೀಲಿ ಬಣ್ಣದ ಡ್ರಮ್ಗಳನ್ನು ಇರಿಸಲಾಗಿದೆ.
ಕುಮಾರಧಾರ ನದಿಯ ಪವಿತ್ರ ತೀರ್ಥವನ್ನು ಮೋಟಾರ್ ಮೂಲಕ ಈ ಡ್ರಮ್ಗಳಿಗೆ ತುಂಬಿಸಲಾಗುತ್ತಿದ್ದು, ಭಕ್ತಾದಿಗಳು ಚೊಂಬುಗಳ ಮೂಲಕ ನೀರೆರೆಚಿಕೊಂಡು ತೀರ್ಥಸ್ನಾನ ಪೂರೈಸಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹೆಚ್ಚಾಗಿದ್ದರೂ ಭಕ್ತಾದಿಗಳು ಸುರಕ್ಷಿತವಾಗಿ ಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಂಡು ಪವಿತ್ರ ಸ್ನಾನ ನೆರವೇರಿಸುತ್ತಿದ್ದಾರೆ
