
ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ನಡೆದ ಕಾಡುಕೋಣ (ಕಾಟಿ) ಅಕ್ರಮ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಲೋಪವಾಗಿದೆ ಎಂದು ಕಡಬದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ದೂರಿಗೆ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಧಿಕೃತ ಹಿಂಬರಹ ನೀಡಿದ್ದಾರೆ. ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡದೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಸುಬ್ರಹ್ಮಣ್ಯ / ಕಡಬ ಕಡಬ ತಾಲೂಕಿನ ಐತ್ತೂರು ಗ್ರಾಮದ ಮುಜೂರು ಮೀಸಲು ಅರಣ್ಯ ವ್ಯಾಪ್ತಿಯ ರಬ್ಬರ್ ನೆಡುತೋಪಿನಲ್ಲಿ ನಡೆದ ಕಾಡುಕೋಣ (ಕಾಟಿ) ಅಕ್ರಮ ಬೇಟೆ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳಿಂದ ಗಂಭೀರ ಲೋಪವಾಗಿದೆ ಎಂದು ಆರೋಪಿಸಿ ಕಡಬದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ದೂರರ್ಜಿಗೆ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸುದೀರ್ಘ ಹಿಂಬರಹ ನೀಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಮಂಗಳೂರು ವಿಭಾಗ) ಅವರ ಸೂಚನೆಯಂತೆ ನೀಡಿರುವ ಈ ಪತ್ರದಲ್ಲಿ, ಅರಣ್ಯ ಇಲಾಖೆಯು ಪ್ರಕರಣ ದಾಖಲಾದ ದಿನದಿಂದ ಕೈಗೊಂಡಿರುವ ಸಂಪೂರ್ಣ ಕಾನೂನು ಕ್ರಮಗಳು ಹಾಗೂ ತನಿಖೆಯ ಹಂತಗಳನ್ನು ವಿವರವಾಗಿ ನೀಡಲಾಗಿದೆ.
ಏನಿದು ಘಟನೆ? ಪ್ರಕರಣದ ಹಿನ್ನೆಲೆ:
2026ರ ಜನವರಿ 25ರಂದು ಮಧ್ಯರಾತ್ರಿ ಬಂದ ಖಚಿತ ವರ್ತಮಾನದ ಮೇರೆಗೆ ಸುಬ್ರಹ್ಮಣ್ಯ ವಲಯ ಅರಣ್ಯ ಸಿಬ್ಬಂದಿಗಳು ಐತ್ತೂರು ಗ್ರಾಮದ ಮುಜೂರು ಮೀಸಲು ಅರಣ್ಯದೊಳಗಿನ KFDC ರಬ್ಬರ್ ನೆಡುತೋಪಿಗೆ ದಾಳಿ ನಡೆಸಿದ್ದರು. ಈ ವೇಳೆ ಬಂದೂಕಿನಿಂದ ಕಾಡುಕೋಣವನ್ನು ಹೊಡೆದು ಕೊಂದು, ಮಾಂಸ ತಯಾರಿಸುತ್ತಿದ್ದ ಸ್ಥಳೀಯ ಆಪಾದಿತರಾದ ಐತ್ತೂರು ಗ್ರಾಮದ ಭುವನೇಶ್ವರ, ಜೀವನ್, ಸಜ್ಜಿನ್ ಹಾಗೂ 102ನೇ ನೆಕ್ಕಿಲಾಡಿ ಗ್ರಾಮದ ಜೈನ್ ವರ್ಕಿ ಎಂಬುವವರು ಅರಣ್ಯ ಸಿಬ್ಬಂದಿಯನ್ನು ಕಂಡು ಸ್ಥಳದಿಂದ ಓಡಿ ಪರಾರಿಯಾಗಿದ್ದರು.
ಹತ್ಯೆಯಾದ ಕಾಡುಕೋಣವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ SCHEDULE-1 (Part-A, Sl No. 175) ವ್ಯಾಪ್ತಿಗೆ ಬರುವ ರಕ್ಷಿತ ಪ್ರಾಣಿಯಾಗಿದ್ದು, ಈ ಸಂಬಂಧ ಕಲಂ 9, 39 $r/w$ 2(16)(a)(c), 50(1)(c), 51 ರ ಅಡಿಯಲ್ಲಿ ಪುತ್ತೂರು ಜೆ.ಎಮ್.ಎಫ್.ಸಿ. ನ್ಯಾಯಾಲಯಕ್ಕೆ ಫಿರ್ಯಾದು ಸಲ್ಲಿಸಲಾಗಿತ್ತು. ಸ್ಥಳ ಪರಿಶೀಲನೆ, ಮಹಜರು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯದ ಅನುಮತಿಯೊಂದಿಗೆ ಮೃತ ಪ್ರಾಣಿಯ ದೇಹದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.


ಅರಣ್ಯ ಇಲಾಖೆ ನೀಡಿದ ಹಿಂಬರಹ ಪತ್ರದ ಪ್ರಕಾರ, ಪ್ರಕರಣದ ತನಿಖೆ ತೀವ್ರಗೊಳಿಸಿ ದಿನಾಂಕ 30-01-2026ರಂದು ಐತ್ತೂರು ಗ್ರಾಮದ ಮಣಿಗಂಡನ್ ಎಂಬಾತನನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳು ಹಾಗೂ ಹೆಚ್ಚುವರಿ ಆರೋಪಿ ಜಸ್ಟಿನ್ ಜೈನ್ ಸೇರಿದಂತೆ ಒಟ್ಟು 5 ಮಂದಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ 09-02-2026ರಂದು ಜಾಮೀನು ಪಡೆದುಕೊಂಡು ಸುಬ್ರಹ್ಮಣ್ಯ ವಲಯ ಕಚೇರಿಗೆ ಹಾಜರಾಗಿ ಮುಚ್ಚಳಿಕೆ ನೀಡಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಐತ್ತೂರು ಗ್ರಾಮದ ಪ್ರಸಾದ್ ಎಂ. ಎಂಬಾತ ಪುತ್ತೂರು ನ್ಯಾಯಾಲಯದಿಂದ ನಿರೀಕ್ಷಾಣಾ ಜಾಮೀನು ಪಡೆದುಕೊಂಡಿದ್ದಾನೆ.
ಫೋರೆನ್ಸಿಕ್ ಪರೀಕ್ಷೆ: ವಶಪಡಿಸಿಕೊಂಡ ಮಾಂಸದ ಮಾದರಿಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ತಮಿಳುನಾಡಿನ ‘Advanced Institute for Wildlife Conservation (Vandalur)’ ಹಾಗೂ ಬೆಂಗಳೂರಿನ ‘State Forensic Science Laboratory (FSL)’ ಗೆ ಕಳುಹಿಸಿ ವರದಿ ಪಡೆಯಲಾಗಿದೆ.
ಯಾವುದೇ ವಿಳಂಬವಿಲ್ಲದೆ ಕ್ರಮ”: ಅರಣ್ಯ ಇಲಾಖೆ
ದೂರುದಾರರಿಗೆ ನೀಡಿರುವ ಪತ್ರದಲ್ಲಿ, ಪ್ರಕರಣ ವರದಿಯಾದ ತಕ್ಷಣವೇ ಯಾವುದೇ ಕಾಲಹರಣ ಮಾಡದೆ ಕಾನೂನು ಮತ್ತು ನಿಯಮಗಳಂತೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಶಂಕಿತರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸಿ, ನ್ಯಾಯಾಲಯದ ಮೂಲಕ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದ್ದು, ಇಲಾಖೆಯ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹಿಂಬರಹದಲ್ಲಿ ತಿಳಿಸಲಾಗಿದೆ.
