
ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿ ಪೇಟೆಯಲ್ಲಿ ಲಾರಿಯೊಂದನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಮನೆಗೆ ಹೋಗಿ ಬರುವಷ್ಟರಲ್ಲಿ, ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಬರೋಬ್ಬರಿ 400 ಲೀಟರ್ ಡೀಸೆಲ್ ಕಳವು ಮಾಡಿರುವ ಘಟನೆ ನಡೆದಿದೆ. ಹೆದ್ದಾರಿ ಬದಿಯಲ್ಲಿ ನಿರಂತರವಾಗಿ ಲಾರಿಗಳಿಂದ ಡೀಸೆಲ್ ಹಾಗೂ ಬ್ಯಾಟರಿಗಳು ಕಳವಾಗುತ್ತಿರುವುದು ಲಾರಿ ಚಾಲಕರು ಮತ್ತು ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.


ನೆಲ್ಯಾಡಿ ನಿವಾಸಿ ಸಾದಿಕ್ ಎಂಬವರು ರಾತ್ರಿ 3 ಗಂಟೆಯ ವೇಳೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ತಮ್ಮ ಲಾರಿಯಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ನೆಲ್ಯಾಡಿ ಪೇಟೆ ಸಮೀಪವಿರುವ ತಮ್ಮ ಮನೆಗೆ ಹೋಗಿ ಬರಲು ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ್ದರು. ಮನೆಗೆ ಹೋಗಿ ವಾಪಸ್ ಬಂದು ಲಾರಿ ಹತ್ತಿ ಇಂಜಿನ್ ಚಾಲೂ ಮಾಡಲು ಯತ್ನಿಸಿದಾಗ ಲಾರಿ ಸ್ಟಾರ್ಟ್ ಆಗಿರಲಿಲ್ಲ. ತಕ್ಷಣ ಗೇಜ್ ಪರಿಶೀಲಿಸಿದಾಗ ಡೀಸೆಲ್ ಖಾಲಿಯಾಗಿರುವುದು ತಿಳಿದುಬಂದಿದೆ. ಕೆಳಗಿಳಿದು ನೋಡಿದಾಗ ಡೀಸೆಲ್ ಟ್ಯಾಂಕ್ನ ಮುಚ್ಚಳವನ್ನು ಮೀಟಿ ತುಂಡು ಮಾಡಿ ಸಂಪೂರ್ಣ ಡೀಸೆಲ್ ಕಳವು ಮಾಡಲಾಗಿತ್ತು. ಈ ಕುರಿತು ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಗುಂಡ್ಯದಿಂದ ಮಾಣಿಯವರೆಗೆ ‘ಡೀಸೆಲ್-ಬ್ಯಾಟರಿ’ ಕಳ್ಳರ ಹಾವಳಿ
ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯದಿಂದ ಮಾಣಿವರೆಗಿನ ವ್ಯಾಪ್ತಿಯಲ್ಲಿ ಈ ಕಳ್ಳರ ಜಾಲ ಸಕ್ರಿಯವಾಗಿದೆ. ರಸ್ತೆ ಬದಿಯಲ್ಲಿ ಲಾರಿ, ಟ್ಯಾಂಕರ್ಗಳನ್ನು ನಿಲ್ಲಿಸಿ ಚಾಲಕರು ನಿದ್ರೆಗೆ ಜಾರಿದಾಗ ಅಥವಾ ಸ್ಥಳೀಯ ಚಾಲಕರು ವಾಹನ ನಿಲ್ಲಿಸಿ ಮನೆಗೆ ತೆರಳಿದಾಗ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.ಈಗಾಗಲೇ ಈ ಭಾಗದಲ್ಲಿ ಡೀಸೆಲ್ ಹಾಗೂ ಬ್ಯಾಟರಿ ಕಳವಾಗಿರುವ ಕುರಿತು ಹಲವು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.


ದೂರು ನೀಡಲೂ ಹಿಂದೇಟು ಹಾಕುವ ಸ್ಥಿತಿ
ಇತರ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುವ ಲಾರಿ ಚಾಲಕರು ಮತ್ತು ಮಾಲೀಕರು ಈ ಕಳ್ಳರ ಹಾವಳಿಗೆ ತುತ್ತಾಗುತ್ತಿದ್ದರೂ, ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ದೂರು ನೀಡಿದರೆ ಕನಿಷ್ಠ 2 ರಿಂದ 3 ದಿನಗಳ ಕಾಲ ಲಾರಿಯನ್ನು ಠಾಣೆ ಮುಂದೆ ಇರಿಸಬೇಕಾಗುತ್ತದೆ. ಇದರಿಂದ ಲಾರಿಯಲ್ಲಿರುವ ಸರಕುಗಳು ಹಾಳಾಗುವ ಅಪಾಯವಿರುವುದರಿಂದ ಬಹುತೇಕ ಚಾಲಕರು ನಷ್ಟ ಅನುಭವಿಸಿದರೂ ದೂರು ನೀಡುವ ಉಸಾಬರಿಗೆ ಹೋಗುತ್ತಿಲ್ಲ.
ಒಟ್ಟಿನಲ್ಲಿ ಹೆದ್ದಾರಿಯುದ್ದಕ್ಕೂ ನಿರಂತರವಾಗಿ ನಡೆಯುತ್ತಿರುವ ಕಳವು ಪ್ರಕರಣಗಳನ್ನು ತಡೆಯಲು ಪೊಲೀಸರು ತಕ್ಷಣವೇ ರಾತ್ರಿ ಗಸ್ತು ಹೆಚ್ಚಿಸಬೇಕು ಮತ್ತು ಕಳ್ಳರ ಜಾಲವನ್ನು ಬಂಧಿಸಬೇಕು ಎಂದು ಲಾರಿ ಚಾಲಕರು ಆಗ್ರಹಿಸಿದ್ದಾರೆ.
