
ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ₹15 ಲಕ್ಷ ಮೌಲ್ಯದ MDMA, ಗಾಂಜಾ, ಕಾರು ಹಾಗೂ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕುವೆಟ್ಟು ನಿವಾಸಿ ಅನ್ಸಾರ್ (21) ಎಂಬಾತನನ್ನು ಬಂಧಿಸಲಾಗಿದ್ದು, ಇಂದು ಸಂಜೆ ದುಬೈಗೆ ಉದ್ಯೋಗಕ್ಕಾಗಿ ವಿಮಾನ ಹತ್ತಬೇಕಿದ್ದ ಆರೋಪಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ.


ಮಾದಕದ್ರವ್ಯ ಜಾಲದ ವಿರುದ್ಧ ಬೆಳ್ತಂಗಡಿ ಪೊಲೀಸರು ಸಮರ ಸಾರಿದ್ದು, ಭಾರಿ ಪ್ರಮಾಣದ ಗಾಂಜಾ ಹಾಗೂ ಎಮ್.ಡಿ.ಎಮ್.ಎ (MDMA) ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಸುಮಾರು ₹15 ಲಕ್ಷ ಮೌಲ್ಯದ ಮಾದಕವಸ್ತು ಹಾಗೂ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕುವೆಟ್ಟು ಗ್ರಾಮದ ಅನ್ಸಾರ್ (21) ಬಂಧಿತ ಆರೋಪಿಯಾಗಿದ್ದು, ಈತನಿಗೆ ಸರಕು ಪೂರೈಸಿದ್ದ ಇನ್ನೋರ್ವ ಪ್ರಮುಖ ಆರೋಪಿ ಕುವೆಟ್ಟು ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ (31) ಪೊಲೀಸರನ್ನ ಕಂಡು ಕಾರು ಬಿಟ್ಟು ಪರಾರಿಯಾಗಿದ್ದಾನೆ.
ಪೊಲೀಸ್ ರೌಂಡ್ಸ್ ವೇಳೆ ಸಿಕ್ಕಿಬಿದ್ದ ಆರೋಪಿ
ಜುಲೈ 29 ರಂದು ರಾತ್ರಿ ಬೆಳ್ತಂಗಡಿ ಪೊಲೀಸರು ಗಸ್ತು (ರೌಂಡ್ಸ್) ಕರ್ತವ್ಯದಲ್ಲಿದ್ದಾಗ, ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡದ ಮುಂಭಾಗ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಅನ್ಸಾರ್, ಪೊಲೀಸ್ ಜೀಪ್ ನೋಡುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣವೇ ಆತನನ್ನು ಬೆನ್ನಟ್ಟಿ ಹಿಡಿದು ತಪಾಸಣೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ.
ವಿಚಾರಣೆ ವೇಳೆ ಆರೋಪಿ ಅನ್ಸಾರ್, ಹಮ್ಜತ್ ಕರಾರ್ ಎಂಬಾತನಿಗೆ ₹20,000 ಮುಂಗಡ ಹಣ ನೀಡಿ ಗಾಂಜಾ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಬರುವುದನ್ನು ಗಮನಿಸಿದ ಹಮ್ಜತ್ 500 ಗ್ರಾಂ ಗಾಂಜಾ ನೀಡುತ್ತಿದ್ದಂತೆಯೇ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.


ಬಳಿಕ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ ಬರೋಬ್ಬರಿ ₹7.60 ಲಕ್ಷ ಮೌಲ್ಯದ ಎಮ್.ಡಿ.ಎಮ್.ಎ (MDMA) ಪತ್ತೆಯಾಗಿದೆ. ಆರೋಪಿ ಅನ್ಸಾರ್ ಬಳಿ ₹1,498 ಮೌಲ್ಯದ 20 ಗ್ರಾಂ ಗಾಂಜಾ, ₹30,000 ಮೌಲ್ಯದ ಮೊಬೈಲ್ ಫೋನ್ ಪತ್ತೆಯಾಗಿದೆ. ಒಟ್ಟಾರೆಯಾಗಿ ಗಾಂಜಾ, ಎಮ್.ಡಿ.ಎಮ್.ಎ, ಕಾರು, ಆಟೋ ರಿಕ್ಷಾ ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹15 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ದುಬೈಗೆ ಹೋಗಬೇಕಿದ್ದವ ಜೈಲುಪಾಲು
ಮಾದಕವಸ್ತು ಜಾಲದಲ್ಲಿ ಸಿಕ್ಕಿಬಿದ್ದು ಬಂಧಿತನಾಗಿರುವ ಕುವೆಟ್ಟು ಗ್ರಾಮದ ಅನ್ಸಾರ್ (21), ಉದ್ಯೋಗಕ್ಕಾಗಿ ಜುಲೈ 30 ರಂದು (ಇಂದು) ಸಂಜೆ ದುಬೈಗೆ ವಿಮಾನ ಏರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ! ಆದರೆ, ಕಾಸಿನ ಆಸೆಗೆ ಮಾದಕವಸ್ತು ಮಾರಾಟ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರಿಂದ ವಿಮಾನ ಹತ್ತಬೇಕಿದ್ದ ಯುವಕ ಈಗ ಕಂಬಿ ಎಣಿಸುವಂತಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ (NDPS) ಕಾಯ್ದೆಯ ಕಲಂ 8(C), 20(b)(ii)(A) ಹಾಗೂ 27A ಅಡಿಯಲ್ಲಿ ಹಮ್ಜತ್ ಕರಾರ್ ಮತ್ತು ಅನ್ಸಾರ್ ವಿರುದ್ಧ ಜುಲೈ 29 ರಂದು ಪ್ರಕರಣ ದಾಖಲಾಗಿದೆ. ಜುಲೈ 30 ರಂದು ಸಂಜೆ ಆರೋಪಿ ಅನ್ಸಾರ್ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ. ತಲೆಮರೆಸಿಕೊಂಡಿರುವ ಹಮ್ಜತ್ಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ಗಳಾದ ಆನಂದ್ ಎಂ. ಮತ್ತು ಸಿಕಂದರ್ ಪಾಷಾ ನೇತೃತ್ವದ ಸಿಬ್ಬಂದಿಗಳಾದ ಸತೀಶ್ ನಾಯ್ಕ್, ಪ್ರಕಾಶ್ ಪೂಜಾರಿ, ಶ್ರೀನಿವಾಸ್, ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್, ದುಂಡಪ್ಪ ಪೂಜಾರಿ, ಚಾಲಕ ಸತೀಶ್ ಹಾಗೂ ಸೋಕೋ (SOCO) ತಂಡದ ಕಾವ್ಯಶ್ರೀ, ಅರ್ಪಿತಾ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
