ಕಂಟೆಂಟ್ ಕ್ರಿಯೇಟರ್ ಪೋಸ್ಟ್ ಮಾಡಿದ ಆ ಒಂದು ರಸ್ತೆ ವೀಡಿಯೋ ಸುಳ್ಯದ ಬಿಜೆಪಿ ಮುಖಂಡರ ನಿದ್ದೆಗೆಡಿಸಿತೆ?

kadaba times

ಸುಬ್ರಹ್ಮಣ್ಯ / ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ‘ಐನೆಕಿದು – ಕೋಟೆ – ಬಾಳುಗೋಡು’ ಮುಖ್ಯ ರಸ್ತೆಯ ದುರವಸ್ಥೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಿಂದ ಸುಳ್ಯ ಕ್ಷೇತ್ರದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ತೀವ್ರಗೊಂಡಿದೆ.

kadaba times
uniq

ಪ್ರಸಿದ್ಧ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆರ್.ಜೆ. ತ್ರಿಶೂಲ್ ಎಂಬವರು ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡು, “ಕಳೆದ 20 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗಿಲ್ಲ. ಕೇವಲ ಭರವಸೆಗಳನ್ನು ಕೇಳಿ ಸುಸ್ತಾದ ಈ ಭಾಗದ ಜನ ಸ್ಥಳೀಯ ಶಾಸಕರ ಮೇಲಿನ ನಂಬಿಕೆ ಕಳೆದುಕೊಂಡು ಪಕ್ಕದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಅವರ ನೆರವು ಕೋರಲು ಮುಂದಾಗಿದ್ದಾರೆ” ಎಂದು ವರದಿ ಮಾಡಿದ್ದರು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರವಾಗುತ್ತಿರುವ ವೇಳೆಯಲ್ಲೇ ಈ ವಿಡಿಯೋ ಭಾರಿ ವೈರಲ್ ಆಗಿ ಬಿಜೆಪಿ ಪ್ರಮುಖರ ಗಮನ ಸೆಳೆದಿತ್ತು.

ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಬಿಡುಗಡೆ ಮಾಡಿ ಸಮರ್ಥಿಸಿಕೊಂಡ ಬಿಜೆಪಿ ಮುಖಂಡರು

ಈ ವೈರಲ್ ವಿಡಿಯೋದ ಆರೋಪಗಳಿಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸ್ಥಳೀಯ ಬಿಜೆಪಿ ಮುಖಂಡರು, ಸುಳ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪವನ್ನು ತೀವ್ರವಾಗಿ ಖಂಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ತಿಳಿಸಿದ ಪ್ರಮುಖ ಅಂಶಗಳು:

  •  ಗ್ರಾಮೀಣ ರಸ್ತೆ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನಕ್ಕೆ ತಂದಿರುವುದು ಸ್ವಾಗತಾರ್ಹ. ಆದರೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಪಂದಿಸುತ್ತಿಲ್ಲ ಹಾಗೂ 20 ವರ್ಷಗಳಿಂದ ಏನೂ ಕೆಲಸವಾಗಿಲ್ಲ ಎನ್ನುವುದು ಸುಳ್ಳು.

    kadaba times
    kadaba times
  • ಅಂಗಾರ ಅವರ ಅವಧಿಯ ಕಾಮಗಾರಿಗಳು: ಮಾಜಿ ಶಾಸಕ ಎಸ್. ಅಂಗಾರ ಅವರ ಅವಧಿಯಲ್ಲಿ ಮಾಲೆಯಾಳ–ಐನೆಕಿದು–ಹರಿಹರ ಸಂಪರ್ಕ ರಸ್ತೆಗೆ ₹4.5 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್/ಡಾಂಬರೀಕರಣ, ಕೋಟೆಬೈಲು ಪ್ರದೇಶದಲ್ಲಿ ₹30 ಲಕ್ಷ ವೆಚ್ಚದ ರಸ್ತೆ ಹಾಗೂ ಕತ್ತಿಮಜಲು ಬಳಿ ₹25 ಲಕ್ಷದ ಕಿರು ಸೇತುವೆ ನಿರ್ಮಿಸಲಾಗಿದೆ.

  • ಪ್ರಸ್ತುತ ಶಾಸಕರ ಅವಧಿಯ ಕಾಮಗಾರಿಗಳು: ಪ್ರಸ್ತುತ ಶಾಸಕಿ ಭಾಗೀರಥಿ ಮುರುಳ್ಯ ಅವರ ಅವಧಿಯಲ್ಲಿ ಮನಾಡು ಬಳಿ ₹20 ಲಕ್ಷದ ಕಿರು ಸೇತುವೆ, ಕೂಜುಗೂಡು ಕಟ್ರಮನೆ ಬಳಿ ₹5 ಲಕ್ಷದ ಸೇತುವೆ ಹಾಗೂ ಐನೆಕಿದು ನವಗ್ರಾಮ ಸಮುದಾಯ ಭವನಕ್ಕೆ ₹10 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

  • ಕುಜುಂಬಾರು–ಈಜಿನಡ್ಕ ಸಂಪರ್ಕ ರಸ್ತೆಯ ಸೇತುವೆಗೆ ₹60 ಲಕ್ಷ ಅನುದಾನ ಮಂಜೂರಾಗಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ.

  • ಜನಪ್ರತಿನಿಧಿಗಳ ಮೇಲೆ ವೈಯಕ್ತಿಕ ನಿಂದನೆ ಅಥವಾ ಗೌರವಕ್ಕೆ ಧಕ್ಕೆ ತರುವ ಮಾತುಗಳು ಇರಬಾರದು.

“ನಮ್ಮ ಪ್ರಶ್ನೆ ಐನೆಕಿದು-ಕೋಟೆ ರಸ್ತೆ ಬಗ್ಗೆ, ಬೇರೆ ಕಡೆ ಕೆಲಸ ಮಾಡಿದ್ದಕ್ಕೆ ಅಲ್ಲ!” – ತ್ರಿಶೂಲ್ ಮರುಪ್ರಶ್ನೆ

ಬಿಜೆಪಿ ಮುಖಂಡರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿರುವ ಆರ್.ಜೆ. ತ್ರಿಶೂಲ್, ಮುಖಂಡರ ಸಮರ್ಥನೆಗೆ ನೇರ ಪ್ರಶ್ನೆಗಳನ್ನಿಟ್ಟು ಕೌಂಟರ್ ನೀಡಿದ್ದಾರೆ. “ನಮ್ಮ ಕಳೆದ ವಿಡಿಯೋದಲ್ಲಿದ್ದ ನೇರ ಪ್ರಶ್ನೆ ಐನೆಕಿದು – ಕೋಟೆ – ಬಾಳುಗೋಡು ರಸ್ತೆಯ ದುರವಸ್ಥೆಯ ಬಗ್ಗೆ. ಆದರೆ ಪ್ರೆಸ್ ಮೀಟ್ ಮಾಡಿದ ನಾಯಕರು ‘ನಾವು ಬೇರೆ ಕಡೆ ಅಭಿವೃದ್ಧಿ ಮಾಡಿದ್ದೇವೆ’ ಎಂದು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಆರಿಸುವುದೇ ಕೆಲಸ ಮಾಡಲು, ಕೆಲಸ ಮಾಡುವುದು ಅವರ ಕರ್ತವ್ಯ. ಬೇರೆ ಕಡೆ ಕೆಲಸ ಆಗಿದೆ ಎಂದರೆ, ಈ ರಸ್ತೆಯ ದುರವಸ್ಥೆಯನ್ನು ಸಹಿಸಿಕೊಂಡು ಸುಮ್ಮನಿರಬೇಕೇ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, “ನಿಜವಾಗಿಯೂ ಜನರ ಕಷ್ಟದ ಬಗ್ಗೆ ಕಾಳಜಿ ಇದ್ದಿದ್ದರೆ, ಕಳೆದ 20 ವರ್ಷಗಳಲ್ಲಿ ಈ ರಸ್ತೆಗಾಗಿ ಪ್ರೆಸ್ ಮೀಟ್ ಮಾಡಬೇಕಿತ್ತು. ಕೇವಲ ಪ್ರಶ್ನೆ ಎತ್ತಿದ ವಿಡಿಯೋಗೆ ಉತ್ತರ ನೀಡಲು ಮಾತ್ರ ಪ್ರೆಸ್ ಮೀಟ್ ಮಾಡಿದ್ದು ಏಕೆ?” ಎಂದು ಖಾರವಾಗಿ ಚಾಟಿ ಬೀಸಿದ್ದಾರೆ.

ಮಾಧ್ಯಮ ಧರ್ಮ ಪಾಲನೆಗೆ ಕಂಟೆಂಟ್ ಕ್ರಿಯೇಟರ್ ವಿನಂತಿ

ಇದೇ ಸಂದರ್ಭದಲ್ಲಿ ವೀಡಿಯೋ ಕಂಟೆಂಟ್ ಕಳುವಿನ ಕುರಿತು ಸ್ಥಳೀಯ ಮಾಧ್ಯಮಗಳ ಗಮನಸೆಳೆದಿರುವ ತ್ರಿಶೂಲ್, “ಸ್ಥಳೀಯ ಮಾಧ್ಯಮಗಳು ಹಾಗೂ ವರದಿಗಾರರು ಸಾರ್ವಜನಿಕ ಸಮಸ್ಯೆಗಳ ಕುರಿತು ನಡೆಸುವ ಗ್ರೌಂಡ್ ರಿಪೋರ್ಟ್‌ಗಳಿಗೆ ನಮ್ಮ ಸಂಪೂರ್ಣ ಗೌರವವಿದೆ. ಆದರೆ, ಕಂಟೆಂಟ್ ಕ್ರಿಯೇಟರ್‌ಗಳು ಶ್ರಮಪಟ್ಟು ಮಾಡಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ, ಮುಖಗಳನ್ನು ಟ್ರಿಮ್ ಮಾಡಿ ತಮ್ಮದೇ ಎಕ್ಸ್‌ಕ್ಲೂಸಿವ್ ವರದಿ ಎಂದು ಹಾಕುವುದು ಸರಿಯಲ್ಲ. ಕಷ್ಟಪಟ್ಟು ಮಾಡಿದ ಕೆಲಸವನ್ನು ‘ಕಾಪಿ-ಪೇಸ್ಟ್’ ಮಾಡುವ ಬದಲು, ಮಾಧ್ಯಮಗಳೇ ಖುದ್ದು ಸ್ಥಳಕ್ಕೆ ತೆರಳಿ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿ” ಎಂದು ಮನವಿ ಮಾಡಿದ್ದಾರೆ.ಪ್ರಸ್ತುತ ಸುಳ್ಯ ಶಾಸಕರ ಕ್ಷೇತ್ರ ವ್ಯಾಪ್ತಿಯ ಐನೆಕಿದು ರಸ್ತೆಯ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಮತ್ತು ಸಾರ್ವಜನಿಕರ ಈ ಸುದೀರ್ಘ ಹೋರಾಟಕ್ಕೆ ಸೂಕ್ತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ

Related Articles

Latest Articles