ಸರಕಾರಿ ಶಾಲೆಗಳ ದುಸ್ಥಿತಿ ಸವಾಲು ಮತ್ತು ಖಾಸಗಿ ಸಂಸ್ಥೆಗೆ 50 ಲಕ್ಷ ಅನುದಾನ ಹಂಚಿಕೆ: ಸುಳ್ಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದ ರಾಜಕೀಯ, ಸಾರ್ವಜನಿಕ ಚರ್ಚೆ

kadaba times

ಕಡಬ/ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರಿಗೆ ರಾಜ್ಯ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನೀಡಿರುವ ಒಟ್ಟು ₹25 ಕೋಟಿ ಅನುದಾನದಲ್ಲಿ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿರುವ ಕಲ್ಲಡ್ಕ ಭಟ್ ಒಡೆತನದ  ಖಾಸಗಿ ಒಡೆತನದ ಖಾಸಗಿ ಶಾಲೆಯ  ಕಟ್ಟಡ ರಚನೆಗಾಗಿ ₹50 ಲಕ್ಷ ಅನುದಾನ ಮೀಸಲಿಟ್ಟಿರುವುದು ಸಾರ್ವಜನಿಕರು, ವಿದ್ಯಾಭಿಮಾನಿಗಳು ಹಾಗೂ ಆಡಳಿತ-ವಿರೋಧ ಪಕ್ಷಗಳ ನಡುವೆ ವಾದ-ಪ್ರತಿವಾದಗಳಿಗೆ ಕಾರಣವಾಗಿದೆ.

kadaba times
uniq

ಸಾರ್ವಜನಿಕ ವಲಯದ ಕಳಕಳಿ: ಸರಕಾರಿ ಶಾಲೆಗಳ ಸ್ಥಿತಿ ಏನಾಗಲಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಶಾಸಕರ ವಿವೇಚನಾಧಿಕಾರದ ಕಾಮಗಾರಿಗಳ ಅಧಿಕೃತ ಪಟ್ಟಿಯ ಪ್ರಕಾರ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಈ ₹50 ಲಕ್ಷದ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದಕ್ಕೆ   ಸ್ಥಳೀಯ ವಿದ್ಯಾಭಿಮಾನಿಗಳು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. “ಸ್ಥಾಪನೆಯಾಗಿ 60 ವರ್ಷಗಳಾದರೂ ಕಡಬ ಸರಕಾರಿ ಹೈಸ್ಕೂಲ್‌ಗೆ ಇಂದಿಗೂ ಸುಸಜ್ಜಿತ ಸಂಪರ್ಕ ರಸ್ತೆಯಿಲ್ಲದೆ ಇಡೀ ತಾಲೂಕಿನಲ್ಲಿ ಕಚ್ಚಾ ರಸ್ತೆ ಹೊಂದಿರುವ ಏಕೈಕ ಶಾಲೆಯಾಗಿದೆ. ಕಡಬ ಸರಕಾರಿ ಕಾಲೇಜಿಗೆ ಪ್ರಯೋಗಾಲಯ (ಲ್ಯಾಬ್) ಇಲ್ಲದೆ ಹಲವು ವರ್ಷಗಳು ಕಳೆದಿವೆ.  ಖಾಸಗಿ ಸಂಸ್ಥೆಗಳು ವಿವಿಧ ಶುಲ್ಕಗಳ ಮೂಲಕ ಹಣ ಸಂಗ್ರಹಿಸುವ ಅವಕಾಶ ಹೊಂದಿರುತ್ತವೆ, ಆದರೆ ಸರಕಾರಿ ಶಾಲೆಗಳಿಗೆ ಸರಕಾರ ಮತ್ತು ದಾನಿಗಳೇ ಆಸರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕಿತ್ತು” ಎಂಬುದು ಸಾರ್ವಜನಿಕರ ವಾದವಾಗಿದೆ.

ಕಾಂಗ್ರೆಸ್ ಆರೋಪ: ‘ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ, 

ಈ ವಿಷಯವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿರುವ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ. ಕೆ. ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನುದಾನ ಹಂಚಿಕೆಯಲ್ಲಿ ಯಾವುದೇ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಮತ್ತು ಕೇವಲ ಬಿಜೆಪಿ ಬೆಂಬಲಿತ ಮುಖಂಡರ ಹಾಗೂ ಸಂಘ-ಸಂಸ್ಥೆಗಳ ಶಿಫಾರಸ್ಸಿನ ಮೇರೆಗೆ ಅನುದಾನ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

“ಕಡಬ ತಾಲೂಕಿನಲ್ಲಿ 118 ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲೆಗಳಿದ್ದು, ಸುಮಾರು 8,358 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದರೂ ಅವುಗಳನ್ನು ಕಡೆಗಣಿಸಿ ಖಾಸಗಿ ಶಿಕ್ಷಣ ಸಂಸ್ಥೆಗೆ ಅನುದಾನ ನೀಡಿರುವ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಸಮಗ್ರ ತನಿಖೆ ನಡೆಸಿ, ಸಾರ್ವಜನಿಕ ಹಣದ ಬಳಕೆಯಲ್ಲಿ ಲೋಪದೋಷಗಳಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅಭಿಲಾಷ್ ಪಿ. ಕೆ. ಒತ್ತಾಯಿಸಿದ್ದಾರೆ.

ಬಿಜೆಪಿ ತಿರುಗೇಟು: ‘ಅನುದಾನ ಹಂಚಿಕೆ ಶಾಸಕರ ಸಾಂವಿಧಾನಿಕ ಹಕ್ಕು’

ಕಾಂಗ್ರೆಸ್‌ನ ಈ ಆರೋಪಗಳನ್ನು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅವರು  ಹೇಳಿಕೆಯ ಮೂಲಕ  ತಳ್ಳಿಹಾಕಿದ್ದಾರೆ. ಶಾಸಕರ ಕ್ರಮವನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಂಡಿರುವ ಅವರು, ಕಾಂಗ್ರೆಸ್ಸಿಗರು ರಾಜಕೀಯ ಪ್ರೇರಿತ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

“ನಮ್ಮ ಪಕ್ಷದ ಶಾಸಕರು ಹಂಚಿರುವ ಅನುದಾನವು ಶಾಸಕರ ಸಾಂವಿಧಾನಿಕ ಹಕ್ಕಿನ ವ್ಯಾಪ್ತಿಗೆ ಒಳಪಟ್ಟಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ, ಅದು ಖಾಸಗಿ ಶಾಲೆಯಾಗಿದ್ದರೂ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಅಧಿಕೃತ ಶಾಲೆಯಾಗಿರುವುದರಿಂದ ಕ್ಷೇತ್ರದ ಎಲ್ಲ ಮಕ್ಕಳ ಹಿತದೃಷ್ಟಿಯಿಂದ ಉತ್ತಮ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ವೆಂಕಟ್ ವಳಲಂಬೆ ಹೇಳಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಅಲ್ಲದೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಬಂದು 3 ವರ್ಷವಾದರೂ ಕ್ಷೇತ್ರಕ್ಕೆ ನೀಡಿದ ಅನುದಾನ ಎಷ್ಟು ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಸವಾಲು ಹಾಕಿರುವ ಅವರು, ಕೇಂದ್ರ ಸರ್ಕಾರದ ಅಕ್ಕಿ ಯೋಜನೆಯನ್ನು ತಮ್ಮದೆಂದು ಬಿಂಬಿಸುವ ಕಾಂಗ್ರೆಸ್‌ನಿಂದ ಬಿಜೆಪಿ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅನುದಾನವನ್ನು ಬಳಸಿಕೊಳ್ಳುವುದು ನಮ್ಮ ಹಕ್ಕು : ಈ ಇಡೀ ವಿವಾದದಲ್ಲಿ “ಅನುದಾನವನ್ನು ಬಳಸಿಕೊಳ್ಳುವುದು  ಹಕ್ಕು” ಎಂಬ ವಾದವು ಆಡಳಿತ ಪಕ್ಷದ ವಲಯದಿಂದ ಕೇಳಿಬಂದಿದೆ. ಆದರೆ, ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಈ ಮಾತನ್ನು ಹೇಳುತ್ತಿರುವವರು ಜನರಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಯಲ್ಲ. ಈ ಗಂಭೀರ ವಿಷಯಕ್ಕೆ ಮತ್ತು ಸಾರ್ವಜನಿಕರ ಆತಂಕಕ್ಕೆ ನೇರವಾಗಿ ಉತ್ತರ ನೀಡಬೇಕಾದ ಜವಾಬ್ದಾರಿ ಸಂಬಂಧಿತ ಶಾಸಕರ (MLA) ಮೇಲಿದೆ. ಜನಸಾಮಾನ್ಯರ ಹಕ್ಕಿನ ಪರವಾಗಿ ಧ್ವನಿ ಎತ್ತಬೇಕಾದ ರಾಜಕೀಯ ಪಕ್ಷದ ಪದಾಧಿಕಾರಿಗಳು, ಶಾಸಕರ ವಿವೇಚನಾ ನಿಧಿಯ ಬಳಕೆಯನ್ನು “ತಮಗೆ ಇರುವ ಹಕ್ಕು” ಎಂದು ಸಮರ್ಥಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ತಾರ್ಕಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

kadaba times
kadaba times

1. ಸಾರ್ವಜನಿಕ ಅನುದಾನ ಯಾರ ವೈಯಕ್ತಿಕ ಹಣವೂ ಅಲ್ಲ: ಸರ್ಕಾರದಿಂದ ಬಿಡುಗಡೆಯಾಗುವ ಅಭಿವೃದ್ಧಿ ಅನುದಾನವು ಯಾವುದೇ ಒಬ್ಬ ಜನಪ್ರತಿನಿಧಿಯ ವೈಯಕ್ತಿಕ ಗಳಿಕೆಯ ಹಣವೂ ಅಲ್ಲ, ಅಥವಾ ಯಾವುದೇ ರಾಜಕೀಯ ಪಕ್ಷದ ನಿಧಿಯಿಂದ ಬಂದ ದೇಣಿಗೆಯೂ ಅಲ್ಲ. ಅದು ಈ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಕಷ್ಟಪಟ್ಟು ಕಟ್ಟುವ ತೆರಿಗೆಯಿಂದ (Tax) ಸಂಗ್ರಹವಾಗುವ ಸಾರ್ವಜನಿಕ ಸಗಟು ಹಣ. ಆದ್ದರಿಂದ, ಅದರ ಬಳಕೆ ಮತ್ತು ಹಂಚಿಕೆಯು ಕೇವಲ ರಾಜಕೀಯ ಹಿತಾಸಕ್ತಿಯನ್ನು ಆಧರಿಸಿರಬಾರದು; ಬದಲಿಗೆ ಸಂಪೂರ್ಣ ಸಾರ್ವಜನಿಕ ಹಿತಾಸಕ್ತಿ, ತಳಮಟ್ಟದ ಅಗತ್ಯ ಮತ್ತು ಪಾರದರ್ಶಕತೆಯನ್ನು ಹೊಂದಿರಬೇಕು.

2. ಹಕ್ಕಿನಷ್ಟೇ ಕರ್ತವ್ಯವೂ ಮುಖ್ಯ: ಸಾರ್ವಜನಿಕ ಅನುದಾನದ ಬಳಕೆಯ ಬಗ್ಗೆ “ಹಕ್ಕು” ಎಂಬ ದೊಡ್ಡ ಮಾತನ್ನು ಆಡುವವರು, ಅದೇ ಸಾರ್ವಜನಿಕ ಜವಾಬ್ದಾರಿಯೊಂದಿಗೆ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಕಡಬದಂತಹ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು, ಸಂಪರ್ಕ ರಸ್ತೆಗಳು ಹಾಗೂ ಇತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವುದು ತಮ್ಮ ಹಕ್ಕಿನಷ್ಟೇ ದೊಡ್ಡ ಕರ್ತವ್ಯವೂ ಹೌದು ಎಂಬುದನ್ನು ಮರೆಯಬಾರದು. ಜನರ ತೆರಿಗೆ ಹಣದ ಮೊದಲ ಆದ್ಯತೆ ಯಾವಾಗಲೂ ಜನರ ಅತ್ಯಂತ ತುರ್ತು ಮತ್ತು ಮೂಲಭೂತ ಅಗತ್ಯಗಳಿಗೇ ಮೀಸಲಿರಬೇಕು.

3. ತರ್ಕಹೀನ ಸಮರ್ಥನೆಯ ಅಪಾಯ ಮತ್ತು ಮೂಡುವ ಅನುಮಾನಗಳು: ಇಂದು ಕೇವಲ “ಶಾಸಕರಿಗೆ ವಿವೇಚನಾಧಿಕಾರದ ಹಕ್ಕಿದೆ” ಎಂಬ ಒಂದೇ ಕಾರಣ ನೀಡಿ ಖಾಸಗಿ ಒಡೆತನದ ಕಟ್ಟಡಗಳಿಗೆ ಸಾರ್ವಜನಿಕ ಅನುದಾನದ ಬಳಕೆಯನ್ನು ಸಮರ್ಥಿಸಿಕೊಳ್ಳುವುದಾದರೆ, ನಾಳೆ ಇದೇ ತರ್ಕವನ್ನು ಮುಂದಿಟ್ಟುಕೊಂಡು ಯಾವುದೇ ಜನಪ್ರತಿನಿಧಿ ತಮ್ಮ ವೈಯಕ್ತಿಕ ಅಥವಾ ಆಪ್ತರ ಮನೆಗಳ ಅಭಿವೃದ್ಧಿಗೂ ಸಾರ್ವಜನಿಕ ಹಣವನ್ನು ಬಳಸಿಕೊಂಡರೂ ಆಶ್ಚರ್ಯಪಡಬೇಕಾಗದ ಅಪಾಯಕಾರಿ ಪರಿಸ್ಥಿತಿ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಈ ಒಟ್ಟಾರೆ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕ್ಷೇತ್ರದ ನೂರಾರು ಸರಕಾರಿ ಶಾಲೆಗಳು ಸಂಕಷ್ಟದಲ್ಲಿರುವಾಗ ಈ ರೀತಿಯಲ್ಲಿ ಒಂದು ಖಾಸಗಿ ಸಂಸ್ಥೆಗೆ ಮಾತ್ರ ಅನುದಾನ ಹಂಚಿಕೆ ಮಾಡಲು ಶಾಸಕರ ಮೇಲೆ ಯಾರಾದರೂ ಪ್ರಭಾವಿ ಶಕ್ತಿಗಳ ಒತ್ತಡವಿತ್ತೇ ಎಂಬ ಅನುಮಾನವೂ ಮೂಡುತ್ತಿದೆ. ಇದಕ್ಕೆ ನಿಖರವಾದ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಶಾಸಕರ ಮೇಲಿದೆ.

ಕ್ಷೇತ್ರದಲ್ಲಿ ಆಂತರಿಕ ರಾಜಕೀಯ ಚರ್ಚೆ: ಪ್ರಚಾರದ ವೈಖರಿ ಬದಲಾಯಿತೇ?

ಸಾಮಾನ್ಯವಾಗಿ ಕ್ಷೇತ್ರದಲ್ಲಿ ಶಾಸಕರ ಸಣ್ಣ ಪುಟ್ಟ ಅನುದಾನಗಳು ಬಿಡುಗಡೆಯಾದರೂ, ರಸ್ತೆ, ಸೇತುವೆ ಅಥವಾ ಯಾವುದೇ ಸಾರ್ವಜನಿಕ ಕಾಮಗಾರಿಗಳಿದ್ದರೂ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್, ಬ್ಯಾನರ್‌ಗಳ ಮೂಲಕ ಭಾರಿ ಪ್ರಚಾರ ಪ್ರಕಟಿಸುವುದು ವಾಡಿಕೆ. ಆದರೆ, ಈ ನಿರ್ದಿಷ್ಟ ₹50 ಲಕ್ಷದ ಅನುದಾನ ಹಂಚಿಕೆಯ ವಿಷಯದಲ್ಲಿ ಸ್ಥಳೀಯ  ಕಾರ್ಯಕರ್ತರು ಯಾವುದೇ ದೊಡ್ಡ ಮಟ್ಟದ ಬಹಿರಂಗ ಪ್ರಚಾರಕ್ಕೆ ಮುಂದಾಗದೆ ಸೌಮ್ಯ ನಡೆ  ಅನುಸರಿಸುತ್ತಿರುವುದು ಕ್ಷೇತ್ರಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

ಇದು ಕಡಬ ಭಾಗದ ಸರಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಸ್ಥಳೀಯರಲ್ಲೇ ಇರುವ ಆಂತರಿಕ ಅಸಮಾಧಾನಕ್ಕೆಅಥವಾ ವಿವಾದ ಮತ್ತಷ್ಟು ದೊಡ್ಡದಾಗಬಾರದು ಎಂಬ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಕಾರ್ಯಕರ್ತರು ಈ ವಿಷಯದಲ್ಲಿ ತಟಸ್ಥರಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಒಟ್ಟಾರೆಯಾಗಿ, ಶಿಕ್ಷಣ ಇಲಾಖೆಯ ನಿಯಮಾವಳಿಗಳ ಚೌಕಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಅನುದಾನ ನೀಡುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರವಾದರೂ, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಭವಿಷ್ಯದ ದೃಷ್ಟಿಯಿಂದ ಇಂತಹ ನಿರ್ಧಾರಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವುದು ಸಹಜವಾಗಿದೆ. ಮುಂಬರುವ ದಿನಗಳಲ್ಲಿ ಈ ಅನುದಾನದ ವಿವಾದವು ಸುಳ್ಯ ರಾಜಕೀಯದಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Related Articles

Latest Articles