
ಕಡಬ: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ, ದೇವಸ್ಥಾನದ ಆವರಣದಲ್ಲಿ ದಾಸ್ತಾನು ಇಟ್ಟಿದ್ದ ಗಂಭೀರ ಪ್ರಕರಣವೊಂದನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಮರಳು ದಾಸ್ತಾನು ಹಾಗೂ ಕಳ್ಳತನದ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.


ಚಾರ್ವಾಕ ಗ್ರಾಮದ ಕುಂಬ್ಲಾಡಿ ನಿವಾಸಿ, ಶ್ರೀ ಕುಕ್ಕೆನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ಸಮಿತಿ ಅಧ್ಯಕ್ಷ ಗಣೇಶ್ (40) ಎಂಬವರೇ ಪೊಲೀಸ್ ಪ್ರಕರಣ ಎದುರಿಸುತ್ತಿರುವ ಆರೋಪಿಯಾಗಿದ್ದಾರೆ.
ರಹಸ್ಯ ಮಾಹಿತಿಯ ಮೇರೆಗೆ ದಾಳಿ:
ಜೂನ್ 27 ರಂದು ಕಡಬ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ (PSI) ಜಂಬುರಾಜ್ ಮಹಾಜನ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಬೇರೊಂದು ಪ್ರಕರಣದ ತನಿಖೆ ಮುಗಿಸಿ ಅಲಂಕಾರು ಗ್ರಾಮದಲ್ಲಿದ್ದರು. ಈ ವೇಳೆ ಚಾರ್ವಾಕ ಗ್ರಾಮದ ಶ್ರೀ ಕುಕ್ಕೆನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್ಐ ಜಂಬುರಾಜ್ ಮಹಾಜನ್ ಅವರು ಸಿಬ್ಬಂದಿಯೊಂದಿಗೆ ಇಲಾಖಾ ಜೀಪ್ನಲ್ಲಿ ಮಧ್ಯಾಹ್ನ 3:30ರ ವೇಳೆಗೆ ಚಾರ್ವಾಕ ಗ್ರಾಮದ ಕುಂಬ್ಲಾಡಿ ಎಂಬಲ್ಲಿರುವ ದೇವಸ್ಥಾನದ ಆವರಣಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಪ್ರಮಾಣದ ಮರಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಯಿತು.
ಪರವಾನಿಗೆ ಇಲ್ಲದ ಅಕ್ರಮ ಮರಳು ಸಂಗ್ರಹ:


ಸ್ಥಳದಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಅವರು ತಾವು ದೇವಸ್ಥಾನದ ಕಮಿಟಿ ಅಧ್ಯಕ್ಷ ಎಂದು ಗುರುತಿಸಿಕೊಂಡಿದ್ದಾರೆ. ದೇವಸ್ಥಾನದ ರಿಪೇರಿ ಕೆಲಸಕ್ಕಾಗಿ ಹತ್ತಿರದಲ್ಲೇ ಹರಿಯುವ ಕುಮಾರಧಾರ ನದಿಯಿಂದ ಕೆಲವು ದಿನಗಳ ಹಿಂದೆ ಮರಳನ್ನು ತಂದು ಇಲ್ಲಿ ಲೋಡ್ ಮಾಡಿ ಸಂಗ್ರಹಿಸಿಟ್ಟಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಈ ಮರಳು ಸಂಗ್ರಹಣೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ರೀತಿಯ ಅಧಿಕೃತ ಪರವಾನಿಗೆಯನ್ನು ಪಡೆದಿರಲಿಲ್ಲ ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಯಾವುದೇ ರಹದಾರಿ ಇಲ್ಲದೆ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಕ್ರಮ ಮರಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಳ್ಳುವ ಸಲುವಾಗಿ ಸ್ಥಳೀಯ ಪಂಚಾಯತುದಾರರಾದ ಶಿವರಾಮ ಗೌಡ ಹಾಗೂ ದಾಮೋದರ ಗೌಡ ಎಂಬವರನ್ನು ಸಾಕ್ಷಿಗಳನ್ನಾಗಿ ಬರಮಾಡಿಕೊಳ್ಳಲಾಯಿತು. ಅವರ ಸಮಕ್ಷಮದಲ್ಲಿ ಮಹಜರು ಪ್ರಕ್ರಿಯೆ ನಡೆಸಿ, ಸ್ಥಳದಲ್ಲಿದ್ದ ಅಂದಾಜು 10,000 ರೂ. ಮೌಲ್ಯದ ಸುಮಾರು ಒಂದು ಟಿಪ್ಪರ್ ಲೋಡ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪಿಎಸ್ಐ ಜಂಬುರಾಜ್ ಮಹಾಜನ್ ಅವರು ನೀಡಿದ ಸ್ವಯಂಪ್ರೇರಿತ (Sue-moto) ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಎಎಸ್ಐ (ASI) ಶಿವರಾಮ ಅವರು ಆರೋಪಿ ಗಣೇಶ್ ವಿರುದ್ಧ ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ಸ್ 1994, ಎಂಎಂಡಿಆರ್ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 303(2) (ಕಳ್ಳತನ) ಅಡಿಯಲ್ಲಿ ಅಪರಾಧ ಕ್ರಮಾಂಕ 0080/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
