ಸಹೋದರಿಯ ಆರೋಗ್ಯ ವಿಚಾರಿಸಲು ಹೋಗಿದ್ದ ಆಲಂಕಾರಿನ ವ್ಯಕ್ತಿ ಆಸ್ಪತ್ರೆಯಲ್ಲಿ ಜಾರಿ ಬಿದ್ದು ಚಿಕಿತ್ಸೆ ಫಲಿಸದೆ ಮೃತ್ಯು

kadaba times

ಕಡಬ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಒಡಹುಟ್ಟಿದ ಸಹೋದರಿಯ ಆರೋಗ್ಯ ವಿಚಾರಿಸಲು ತೆರಳಿದ್ದ ವ್ಯಕ್ತಿಯೊಬ್ಬರು, ಆಸ್ಪತ್ರೆಯ ಅಂಗಳದಲ್ಲೇ ಕಾಲು ಜಾರಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಅತ್ಯಂತ ಕರುಣಾಜನಕ ಘಟನೆಯೊಂದು ಮಂಗಳೂರಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

kadaba times
uniq

ಕಡಬ ತಾಲೂಕಿನ ಆಲಂಕಾರು ಗ್ರಾಮದ ಕೇಪುಳು ನಿವಾಸಿ ಲಿಂಗಪ್ಪ ಪೂಜಾರಿ ಅವರ ಪುತ್ರ ಶಿವರಾಮ ಕೆ. (47) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಉಪ್ಪಿನಂಗಡಿಯ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಸ್ಕ್ಯಾನ್ ಸೆಂಟರ್‌ನಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇಂಟರ್‌ಲಾಕ್‌ನಲ್ಲಿ ಜಾರಿ ಬಿದ್ದು ದುರಂತ: 

ಮೃತ ಶಿವರಾಮ ಅವರು ಬುಧವಾರ ಮಧ್ಯಾಹ್ನದ ವೇಳೆ ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಂದಿದ್ದರು. ಆಸ್ಪತ್ರೆಯ ವಾರ್ಡ್‌ನಲ್ಲಿ ಸಹೋದರಿಯ ಬಳಿ ಕುಳಿತು ಆಕೆಯ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿ ಸಮಾಧಾನದ ಮಾತುಗಳನ್ನಾಡಿದ್ದರು. ತದನಂತರ ಅಲ್ಲಿಂದ ಮನೆಗೆ ಹಿಂತಿರುಗಲೆಂದು ಆಸ್ಪತ್ರೆಯ ವಾರ್ಡ್‌ನಿಂದ ಹೊರಬಂದು ಅಂಗಳಕ್ಕೆ ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಅಂಗಳದಲ್ಲಿ ಅಳವಡಿಸಲಾಗಿದ್ದ ಇಂಟರ್‌ಲಾಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಹಿಮ್ಮುಖವಾಗಿ ಕಾಲು ಜಾರಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆಯ ಹಿಂಭಾಗಕ್ಕೆ ಗಂಭೀರವಾದ ಗಾಯವಾಗಿತ್ತು.

kadaba times
kadaba times
ಮನೆಗೆ ಮರಳುವಾಗ ಏರುಪೇರಾದ ಆರೋಗ್ಯ:

ಘಟನೆ ನಡೆದ ತಕ್ಷಣ ಆಸ್ಪತ್ರೆಯಲ್ಲಿದ್ದ ಸ್ಥಳೀಯರು ಹಾಗೂ ಸಾರ್ವಜನಿಕರು ಸೇರಿ ಗಾಯಾಳುವನ್ನು ತಕ್ಷಣವೇ ರಕ್ಷಿಸಿ, ಆಸ್ಪತ್ರೆಯಲ್ಲೇ ತುರ್ತು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆಯ ಬಳಿಕ ಶಿವರಾಮ ಅವರು ಚೇತರಿಸಿಕೊಂಡಂತೆ ಕಂಡುಬಂದಿದ್ದರಿಂದ, ಅವರನ್ನು ಮನೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಂಗಳೂರಿನಿಂದ ಊರಿಗೆ ಹಿಂತಿರುಗುವ ದಾರಿ ಮಧ್ಯೆ ಇದ್ದಕ್ಕಿದ್ದಂತೆ ಶಿವರಾಮ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದೆ. ತಲೆಯೊಳಗಿನ ಆಂತರಿಕ ರಕ್ತಸ್ರಾವದಿಂದಾಗಿ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು: ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಕುಟುಂಬಸ್ಥರು ತಕ್ಷಣವೇ ಅವರನ್ನು ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ತಲೆಗೆ ಬಿದ್ದ ಪೆಟ್ಟು ತೀವ್ರವಾಗಿದ್ದ ಕಾರಣ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ತಡರಾತ್ರಿ ವೇಳೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು  ತಿಳಿಸಿವೆ.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ವೃದ್ಧ ತಂದೆ-ತಾಯಿಯನ್ನು ಒಳಗೊಂಡಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರಿಯನ್ನು ನೋಡಲು ಹೋದ ಮನೆಯ ಯಜಮಾನನೇ ಹೆಣವಾಗಿ ಮರಳಿರುವ ದೃಶ್ಯ ಆಲಂಕಾರು ಗ್ರಾಮದ ಜನರ ದುಖಕ್ಕೆ ಕಾರಣವಾಗಿದೆ.

Related Articles

Latest Articles