
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪ್ರಮುಖ ಪೇಟೆಗಳಲ್ಲೊಂದಾದ ನೆಲ್ಯಾಡಿಯಲ್ಲಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ದ್ವಿಚಕ್ರ ವಾಹನವೊಂದು ನಿಗೂಢವಾಗಿ ಅನಾಥವಾಗಿ ನಿಂತಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಹಾಗೂ ಸಂಶಯಗಳಿಗೆ ಕಾರಣವಾಗಿದೆ.


ನೆಲ್ಯಾಡಿ ಪೇಟೆಯ ಹೃದಯಭಾಗದಲ್ಲಿರುವ ಪ್ರಸಿದ್ಧ ‘ಶ್ರೀ ದುರ್ಗಾಶ್ರೀ ಕಾಂಪ್ಲೆಕ್ಸ್’ ಮುಂಭಾಗದಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಒಂದೇ ಜಾಗದಲ್ಲಿ ನಿಂತಿದೆ. ಈ ವಾಹನವನ್ನು ಯಾರು ಇಲ್ಲಿ ತಂದು ನಿಲ್ಲಿಸಿದ್ದಾರೆ? ಯಾವ ಉದ್ದೇಶಕ್ಕಾಗಿ ನಿಲ್ಲಿಸಿ ಹೋಗಿದ್ದಾರೆ? ಎಂಬ ಬಗ್ಗೆ ಕಾಂಪ್ಲೆಕ್ಸ್ನವರಿಗಾಗಲಿ ಅಥವಾ ಸ್ಥಳೀಯ ವ್ಯಾಪಾರಿಗಳಿಗಾಗಲಿ ಯಾವುದೇ ನಿಖರವಾದ ಮಾಹಿತಿ ಇಲ್ಲ. ಹೆದ್ದಾರಿ ಬದಿಯಲ್ಲೇ ಇಷ್ಟು ದಿನಗಳಿಂದ ವಾಹನ ನಿಂತಿದ್ದರೂ ಯಾರೂ ಇದರ ಮಾಲೀಕತ್ವ ಕೋರಿ ಬಂದಿಲ್ಲ.
ಕಾಪು ಮೂಲದ ವ್ಯಕ್ತಿ; ಮೊಬೈಲ್ ಸ್ವಿಚ್ ಆಫ್!
ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಉಡುಪಿ ಜಿಲ್ಲೆಯ ಕಾಪು ಮೂಲದ ವ್ಯಕ್ತಿಯೊಬ್ಬರು ಈ ದ್ವಿಚಕ್ರ ವಾಹನವನ್ನು ಇಲ್ಲಿ ನಿಲ್ಲಿಸಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಾಹನದ ನೈಜ ಮಾಲೀಕರನ್ನು ಪತ್ತೆಹಚ್ಚಲು ಸ್ಥಳೀಯರು ಪ್ರಯತ್ನಿಸಿದಾಗ, ಅವರ ಮೊಬೈಲ್ ಸಂಖ್ಯೆ ಸದ್ಯ ‘ಸ್ವಿಚ್ ಆಫ್’ ಬರುತ್ತಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಹೆದ್ದಾರಿಯ ಜನನಿಬಿಡ ಪ್ರದೇಶದಲ್ಲೇ ಸ್ಕೂಟರ್ ಅನಾಥವಾಗಿ ಬಿದ್ದಿರುವ ಕುರಿತು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನದ ನಂಬರ್ ಪ್ಲೇಟ್ (KA 21, EC 5607) ಆಧಾರದ ಮೇಲೆ ಆರ್.ಟಿ.ಓ (RTO) ದಾಖಲೆಗಳನ್ನು ಪರಿಶೀಲಿಸಿ ಮಾಲೀಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸ್ಕೂಟರ್ ಕಳವು ಮಾಡಿದ್ದೇ ಅಥವಾ ಇದರ ಹಿಂದೆ ಬೇರೇನಾದರೂ ರಹಸ್ಯವಿದೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
