
ಕಡಬ: ತಾಲೂಕಿನ ಐತ್ತೂರು ಗ್ರಾಮದ ಕೈಕುರೆ ಎಂಬಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದೊಳಗೆ ನಡೆದಿರುವ ಜಗಳ ಮತ್ತೊಂದು ತಿರುವು ಪಡೆದುಕೊಂಡಿದೆ., ಇದೀಗ ಅತ್ತೆ ಡೀಕಮ್ಮ (70) ಅವರು ಸೊಸೆಯ ವಿರುದ್ಧವೇ ಕಡಬ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು (Counter Case) ದಾಖಲಿಸಿದ್ದಾರೆ.


ಪ್ರಕರಣದ ಹಿನ್ನೆಲೆ: ಐತ್ತೂರು ಗ್ರಾಮದ ಕೈಕುರೆ ನಿವಾಸಿ, ದಿ. ನಾಗಣ್ಣ ಗೌಡ ಅವರ ಪತ್ನಿ ಡೀಕಮ್ಮ ಅವರು ನೀಡಿರುವ ದೂರಿನ ಪ್ರಕಾರ, ಅವರಿಗೆ ಒಟ್ಟು 6 ಮಂದಿ ಮಕ್ಕಳಿದ್ದಾರೆ. ಈ ಪೈಕಿ ಐವರು ಹೆಣ್ಣು ಮಕ್ಕಳಾಗಿದ್ದು, ಒಬ್ಬನೇ ಗಂಡು ಮಗನಾಗಿದ್ದ ಪವನ್ ಕುಮಾರ್ ಅವರು ಆರು ತಿಂಗಳ ಹಿಂದಷ್ಟೇ ಮೃತರಾಗಿದ್ದಾರೆ. ಪವನ್ ಕುಮಾರ್ ಅವರ ಪತ್ನಿ ಸದ್ಯ ಅತ್ತೆ ಡೀಕಮ್ಮ ಅವರೊಂದಿಗೆ ಒಂದೇ ಮನೆಯಲ್ಲಿ ವಾಸ್ತವ್ಯವಿದ್ದಾರೆ.
ತೋಟದ ಬೆಳೆ ಮಾರಾಟದ ವಿವಾದ: ದೂರುದಾರರಾದ ಡೀಕಮ್ಮ ಅವರ ಅನುಭೋಗದಲ್ಲಿರುವ ಕೃಷಿ ಜಾಗವು ಜಂಟಿ ಖಾತೆಯಲ್ಲಿದ್ದು, ಮಕ್ಕಳಿಗೆ ಇನ್ನೂ ಭಾಗಗಳನ್ನು ವಿಂಗಡನೆ ಮಾಡಿಕೊಟ್ಟಿಲ್ಲ. ಹೀಗಿರುವಾಗ ಸೊಸೆ ತನ್ನ ಇಚ್ಛಾನುಸಾರವಾಗಿ ವರ್ತಿಸುತ್ತಿದ್ದು, ಜಂಟಿ ತೋಟದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳನ್ನು ತಾನೇ ಕೊಯ್ದು ಮಾರಾಟ ಮಾಡುತ್ತಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದಾಗ ಸೊಸೆ ಉದ್ಧಟತನದಿಂದ ವರ್ತಿಸಿ, ಬೈದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.


ಕಾಲು ಮುರಿಯುವ ಬೆದರಿಕೆ: ಜೂನ್ 21ರಂದು ಬೆಳಗ್ಗೆ 7:30ರ ಸುಮಾರಿಗೆ ಅತ್ತೆ ಡೀಕಮ್ಮ ಅವರು ಎಂದಿನಂತೆ ತಮ್ಮ ಅಡಿಕೆ ತೋಟಕ್ಕೆ ಹೋಗುತ್ತಿದ್ದಾಗ, ಸೊಸೆ ದಾರಿ ತಡೆದಿದು “ಇದು ನನ್ನ ಗಂಡನ ತೋಟ” ಎಂದು ಹೇಳಿದ್ದಲ್ಲದೆ, ಕಾಲು ಮುರಿಯುವುದಾಗಿ ಹಾಗೂ ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಸಿಲುಕಿಸುವುದಾಗಿ ಭೀತಿ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ, ಬಲವಂತವಾಗಿ ದೂಡಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಡಬ ಠಾಣೆಯಲ್ಲಿ ಎಫ್ಐಆರ್ ದಾಖಲು: ತಮಗೆ ದೈಹಿಕವಾಗಿ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿರುವ ಸೊಸೆ ರಶ್ಮಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡೀಕಮ್ಮ ಅವರು ಕಡಬ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಸೆಕ್ಷನ್ಗಳಡಿ (U/s-115(2), 126(2), 351(2), 352) ಕಡಬ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಂದೇ ಆಸ್ತಿ ವಿವಾದಕ್ಕೆ ಸಂಬಂಧಿಸಿ ಒಂದೇ ಮನೆಯವರಿಂದ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ
