ದಕ್ಷಿಣ ಕನ್ನಡ: ಅಪರೂಪದ ‘ಕುಲೆ ಮದಿಮೆ’ : ಬಾಳೆದಿಂಡಿನ ಬೊಂಬೆಗಳಿಗೆ ಧಾರೆ ಎರೆದು ಮೃತ ಆತ್ಮಗಳಿಗೆ ಸದ್ಗತಿ

kadaba times

ದಕ್ಷಿಣ ಕನ್ನಡ/ಪುತ್ತೂರು:  ಬದುಕಿರುವ ವ್ಯಕ್ತಿಗಳಿಗೆ ವೈವಾಹಿಕ ಜೀವನಕ್ಕೆ ನಾಂದಿ ಹಾಡಲು ಹೇಗೆ ಮದುವೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲಾಗುತ್ತದೆಯೋ, ಅದೇ ರೀತಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಪ್ರೇತಾತ್ಮಗಳಿಗೆ ಜೂನ್ 21ರಂದು ವಿಧ್ಯುಕ್ತವಾಗಿ ಮದುವೆ ಮಾಡಿಸಿದ ಅಪರೂಪದ ಘಟನೆಗೆ ಪುತ್ತೂರು ತಾಲೂಕಿನ ಮುಂಡೂರು ಬಾರಿಕೆ ಇತ್ತೀಚೆಗೆ ಸಾಕ್ಷಿಯಾಗಿದೆ.ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ’ಪ್ರೇತ ವಿವಾಹ’ (ಕುಲೆತ ಮದಿಮೆ) ಮೂಲಕ ಮೃತ ಆತ್ಮಗಳಿಗೆ ಸದ್ಗತಿ ಕೊಡಿಸಲಾಗಿದೆ.

kadaba times
uniq
ದೋಷ ಪರಿಹಾರಕ್ಕಾಗಿ ಜ್ಯೋತಿಷಿಗಳ ಮೊರೆ:

ಮುಂಡೂರು ಬಾರಿಕೆಯ ಆನಂದ (ಬಾರಿಕೆ ದಿ. ತಿಮ್ಮಪ್ಪ ಮತ್ತು ಗಿರಿಜಾ ದಂಪತಿ ಪುತ್ರ) ಹಾಗೂ ಮುಂಡೂರು ಬದಿಯಡ್ಕದ ಸರೋಜಾ (ದಿ. ಮುತ್ತಪ್ಪ ಮತ್ತು ದೇವಕಿ ದಂಪತಿ ಪುತ್ರಿ) ಇಬ್ಬರೂ ಕೂಡ ತಮ್ಮ ಎಳೆಯ ಪ್ರಾಯದಲ್ಲೇ ನಿಧನ ಹೊಂದಿದ್ದರು.  ಇತ್ತೀಚಿನ ದಿನಗಳಲ್ಲಿ ಆನಂದ ಅವರ ಕುಟುಂಬಸ್ಥರಲ್ಲಿ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿದ್ದವು. ಕುಟುಂಬದ ಈ ಕಷ್ಟಗಳಿಗೆ ಕಾರಣ ತಿಳಿಯಲು ಜ್ಯೋತಿಷಿಗಳ ಸಲಹೆಯಂತೆ ’ಪ್ರಶ್ನಾ ಚಿಂತನೆ’ ನಡೆಸಿದಾಗ, ಅವಿವಾಹಿತರಾಗಿ ಮೃತಪಟ್ಟ ಆನಂದ ಅವರ ಆತ್ಮವು ಅತೃಪ್ತವಾಗಿರುವುದೇ ಈ ಎಲ್ಲಾ ದೋಷಗಳಿಗೆ ಕಾರಣ ಎಂದು ತಿಳಿದುಬಂದಿತ್ತು. ಅದರಂತೆ, ಆತ್ಮಕ್ಕೆ ಮುಕ್ತಿ ನೀಡಲು ಮತ್ತು ಕುಟುಂಬದ ಸುಕ್ಷೇಮಕ್ಕಾಗಿ ಸೋದರ ಸಂಬಂಧದಲ್ಲೇ ಇದ್ದ ಮಾವನ ಮಗಳು ಸರೋಜಾಳ ಆತ್ಮದೊಂದಿಗೆ ಆನಂದರ ವಿವಾಹ ಜರುಗಿಸಲು ಹಿರಿಯರು ನಿರ್ಧರಿಸಿದರು.

ಧಾರ್ಮಿಕ ವಿಧಿವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದ ಈ ವಿಶಿಷ್ಟ ಮದುವೆಯ ಪೌರೋಹಿತ್ಯವನ್ನು ಪ್ರೇತ ವಿವಾಹ ಕಾರ್ಯಗಳಲ್ಲಿ ಅಪಾರ ಅನುಭವವಿರುವ ಧರ್ಮಪಾಲ ಶೇಣಿ ಅವರು ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಎಲ್ಲಾ ವಿವಾಹ ವಿಧಿಗಳು ಜರುಗಿದವು. ಕುಟುಂಬದ ಸದಸ್ಯರೇ ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ನಿಂತು ಮದುವೆಯ ಜವಾಬ್ದಾರಿ ನಿಭಾಯಿಸಿದರು. “ನಮ್ಮ ಪೂರ್ವಜರು ನೀಡಿರುವ ಆಚರಣೆಗಳು ಮೌಢ್ಯವಲ್ಲ, ಅವುಗಳ ಹಿಂದೆ ಆಧ್ಯಾತ್ಮಿಕ ಸತ್ಯಗಳಿವೆ” ಎಂದು ನೆಮ್ಮದಿ ನಿಟ್ಟುಸಿರು ಬಿಟ್ಟ ಕುಟುಂಬಸ್ಥರು, ಮದುವೆಯ ಬಳಿಕ ಬಂದ ನೆಂಟರಿಷ್ಟರಿಗೆ ಅದ್ದೂರಿ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು.

ಹೀಗೆ ನಡೆಯುತ್ತದೆ ವಿಶಿಷ್ಟ ‘ಪ್ರೇತ ವಿವಾಹ’:

ಇದು ಕೇಳಲು ಪ್ರೇತ ವಿವಾಹವಾದರೂ, ಪ್ರಕ್ರಿಯೆಗಳೆಲ್ಲವೂ ಜೀವಂತ ವ್ಯಕ್ತಿಗಳ ಮದುವೆಯಂತೆಯೇ ಸಾಗುತ್ತವೆ.

  1. ಮಾತುಕತೆ ಮತ್ತು ನಿಶ್ಚಿತಾರ್ಥ: ಮೊದಲು ಮೃತ ಗಂಡಿಗೆ ಸೂಕ್ತ ಮೃತ ಹೆಣ್ಣಿನ ಜಾತಕ ಹುಡುಕಿ, ಮಾತುಕತೆ ನಡೆಸಿ ವಿವಾಹ ನಿಶ್ಚಿತಾರ್ಥ ಮಾಡಲಾಗುತ್ತದೆ.

    kadaba times
    kadaba times
  2. ಮದುರಂಗಿ ಶಾಸ್ತ್ರ: ಮದುವೆಯ ದಿನ ನಿಗದಿಯಾದ ಬಳಿಕ ಮದುರಂಗಿ ಶಾಸ್ತ್ರ ನಡೆಸಿ, ವಧು-ವರರಿಗೆ ಬಟ್ಟೆ, ಚಪ್ಪಲಿಯಿಂದ ಹಿಡಿದು ಎಲ್ಲವನ್ನೂ ಹೊಸತನ್ನೇ ತರಲಾಗುತ್ತದೆ.

  3. ಬೊಂಬೆಗಳ ತಯಾರಿ: ಮದುವೆಯ ದಿನ ಎರಡು ದೊಡ್ಡ ಮಣ್ಣಿನ ಪಾತ್ರೆಗಳಿಗೆ ಕಣ್ಣು, ಮೂಗು, ಬಾಯಿ, ಮೀಸೆ ಬಿಡಿಸಿ ತಲೆಯ ಆಕೃತಿ ಮಾಡಲಾಗುತ್ತದೆ. ಎರಡು ಬಾಳೆದಿಂಡುಗಳನ್ನು ನೆಟ್ಟು, ಅದಕ್ಕೆ ಅಡ್ಡಲಾಗಿ ಸಲಾಕೆ ಇಟ್ಟು ಕೈಗಳ ರೂಪ ನೀಡಲಾಗುತ್ತದೆ. ತುದಿಗೆ ಮಣ್ಣಿನ ತಲೆಯನ್ನಿಟ್ಟು ಮಾನವ ರೂಪದ ಬೊಂಬೆಗಳನ್ನು ಸಿದ್ಧಪಡಿಸಲಾಗುತ್ತದೆ.

  4. ಶೃಂಗಾರ ಮತ್ತು ಧಾರೆ: ಹೆಣ್ಣಿನ ಬೊಂಬೆಗೆ ಸೀರೆ, ರವಿಕೆ, ಬಳೆ, ಕೊರಳಿಗೆ ಚಿನ್ನದ ಸರ, ಮಲ್ಲಿಗೆ ಹೂ ಮುಡಿಸಿದರೆ, ಗಂಡಿನ ಬೊಂಬೆಗೆ ಅಂಗಿ, ಲುಂಗಿ, ವಾಚ್ ಕಟ್ಟಿ ಶೃಂಗರಿಸಲಾಗುತ್ತದೆ. ತದನಂತರ ಸಾಂಪ್ರದಾಯಿಕವಾಗಿ ಧಾರೆ ಎರೆಯುವುದು, ಮಾಂಗಲ್ಯ ಧಾರಣೆ, ಅಕ್ಷತೆ ಹಾಕಿ ಆಶೀರ್ವದಿಸುವ ಕಾರ್ಯಗಳು ಮದುವೆಯಂತೆಯೇ ನಡೆಯುತ್ತವೆ.

ಕೊನೆಗೆ ಈ ಬೊಂಬೆಗಳನ್ನು ಗೌರವಪೂರ್ವಕವಾಗಿ ಮನೆಯೊಳಗೆ ಕೊಂಡೊಯ್ದು ಕೆಲವು ಆಚರಣೆಗಳನ್ನು ನಡೆಸುವ ಮೂಲಕ ಈ ವಿಶಿಷ್ಟ ಕಲ್ಯಾಣ ಮಹೋತ್ಸವ ಮುಕ್ತಾಯಗೊಳ್ಳುತ್ತದೆ. ಈ ಮೂಲಕ ತುಳುನಾಡಿನ ಮತ್ತೊಂದು ವಿಶಿಷ್ಟ ಸಂಪ್ರದಾಯ ಯಶಸ್ವಿಯಾಗಿ ಅನಾವರಣಗೊಂಡಿದೆ.

Related Articles

Latest Articles