
ಕಡಬ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವಿಧವೆಯೊಬ್ಬರ ಮನೆಗೆ ನುಗ್ಗಿ, ಜೀವಬೆದರಿಕೆ ಹಾಕಿ ಬಲವಂತವಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ ಘಟನೆ ಐತ್ತೂರು ಗ್ರಾಮದ ಕೈಕುರೆ ಎಂಬಲ್ಲಿ ನಡೆದಿದ್ದು ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಐತ್ತೂರು ಗ್ರಾಮದ ಕೈಕುರೆ ನಿವಾಸಿ, ದಿ. ಪವನ್ ಕುಮಾರ್ ಅವರ ಪತ್ನಿ ರಶ್ಮಿ ಎಂ.ಡಿ. (37) ಎಂಬವರೇ ದೂರು ನೀಡಿದ ಸಂತ್ರಸ್ತೆಯಾಗಿದ್ದಾರೆ. ಪತಿ 8 ತಿಂಗಳ ಹಿಂದೆ ಮೃತಪಟ್ಟಿದ್ದು, ಮಹಿಳೆಯು ತಮ್ಮ ಇಬ್ಬರು ಮಕ್ಕಳು ಹಾಗೂ ಅತ್ತೆ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಸಂತ್ರಸ್ತೆ ಮತ್ತು ಅವರ ಅತ್ತಿಗೆ ನಡುವೆ ಕಳೆದ ಕೆಲವು ಸಮಯದಿಂದ ಜಾಗದ ತಕರಾರು ನಡೆಯುತ್ತಿದ್ದು, ಈ ವಿವಾದವು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿದೆ.
ಬೊಲೆರೋ ವಾಹನದಲ್ಲಿ ಬಂದು ಬೆದರಿಕೆ: ನ್ಯಾಯಾಲಯದಲ್ಲಿ ಕೇಸ್ ಇದ್ದರೂ ಸಹ, ಜೂನ್ 19ರಂದು ಸಂಜೆ 6 ಗಂಟೆಗೆ ಅತ್ತಿಗೆ ಅಪರಿಚಿತ ವ್ಯಕ್ತಿಯೊಬ್ಬನನ್ನು ಸಂತ್ರಸ್ತೆ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆ ಬಳಿಕ ಸಂಜೆ ಬೊಲೆರೋ ವಾಹನದಲ್ಲಿ ಮತ್ತೋರ್ವ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ . ಈ ನಾಲ್ವರ ತಂಡವು ರಶ್ಮಿ ವಾಸವಿದ್ದ ಕೊಠಡಿಯ ಬಳಿ ಬಂದು ಸಂಶಯಾಸ್ಪದವಾಗಿ ಪರಿಶೀಲನೆ ನಡೆಸಿದ್ದಲ್ಲದೆ, ತೋಟದ ಕಡೆಗೂ ಹೋಗಿ ಬಂದಿದ್ದಾರೆ. “ನಿನ್ನನ್ನು ಮನೆಯಿಂದ ಓಡಿಸುತ್ತೇವೆ” ಎಂದು ರಶ್ಮಿ ಅವರಿಗೆ ನೇರವಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ


ಮರುದಿನ ಅಂದರೆ ಜೂನ್ 20ರಂದು ಬೆಳಗ್ಗೆ 8:30ರ ಸುಮಾರಿಗೆ ಅತ್ತಿಗೆ ಮತ್ತು ಆಕೆಯ ಇಬ್ಬರು ಮಕ್ಕಳು, ಅತ್ತೆ ಸೇರಿಕೊಂಡು ಸಂತ್ರಸ್ತೆಯ ಸ್ವಾಧೀನದಲ್ಲಿರುವ ಕೃಷಿ ಆಸ್ತಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ತಕ್ಷಣವೇ ತಮ್ಮ ತಂದೆ ಹಾಗೂ ಚಿಕ್ಕಪ್ಪ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಕಡಬ ಠಾಣೆಯಲ್ಲಿ ಪ್ರಕರಣ ದಾಖಲು: ತಮಗೆ ಹಾಗೂ ತಮ್ಮ ಮಕ್ಕಳಿಗೆ ಜೀವಬೆದರಿಕೆ ಒಡ್ಡಿರುವ ಮೋಹಿನಿ (A1), ಸುನಿಲ್ ರೈ (A2) ಹಾಗೂ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಶ್ಮಿ ಅವರು ಕಡಬ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
